ಮಲ್ಲಿಕಾರ್ಜುನ್ ಸಭಾತ್ಯಾಗ
ಕಡೂರು: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮುಖಂಡರ ಮಾತಿಗೆ ಬೇಸರಗೊಂಡು ಜಿಲ್ಲಾ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಸಭೆ ಮಧ್ಯದಲ್ಲಿಯೇ ನಿರ್ಗಮಿಸಿದ ಘಟನೆ ನಡೆಯಿತು. ಕಡೂರು ವಿಧಾನಸಭಾ ಕ್ಷೇತ್ರದ ಯಳ್ಳಂಬಳಸೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಪರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಹಲವು ಮುಖಂಡರ ಭಾಷಣ ನಡೆಯುತ್ತಿತ್ತು. ಮುಖಂಡ ಹೈದರ್ ಖಾನ್ ಮಾತನಾಡಿ, ಕಡೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಕೆ.ಎಂ. ಕೃಷ್ಣಮೂರ್ತಿಯವರ ನಿಧನಾನಂತರ ಕ್ಷೇತ್ರವು ತಬ್ಬಲಿಯಾಗಿದ್ದು, ಕಡೂರು ಕ್ಷೇತ್ರದಲ್ಲಿ ಸಮರ್ಥ ನಾಯಕರಿಲ್ಲದೆ ನಾವುಗಳೂ ಕೂಡ ತಬ್ಬಲಿಯಾಗಿದ್ದೇವೆ. ನಮಗೆ ಯಾವ ರಾಜಕೀಯ ಶಕ್ತಿ ಇಲ್ಲದಂತಾಗಿದೆ ಎಂದು ಹೇಳಿದರು.
ಆಗ ಸಭೆಯಲ್ಲಿದ್ಜ ಕೆ.ಬಿ. ಮಲ್ಲಿಕಾರ್ಜುನ್ ಕಳೆದ 11 ತಿಂಗಳಿಂದ ಕಡೂರು ಕ್ಷೇತ್ರದಲ್ಲಿ ನಾವು ಏನೂ ಮಾಡಿಲ್ಲವೇ ಇದು ಏನೆಂದು ತಮಗೆ ಎಲ್ಲಾ ತಿಳಿದಿದೆ ಎಂದು ಬೇಸರಗೊಂಡು ದಿಢೀರನೆ ಸಭೆಯ ಮಧ್ಯದಲ್ಲಿಯೇ ಎದ್ದು ಹೊರನಡೆದರು. ಮಲ್ಲಿಕಾರ್ಜುನ್ ಅವರನ್ನು ಸಭೆಗೆ ಕರೆತರಲು ವಿವಿಧ ಮುಖಂಡರು ಮಾಡಿದ ಪ್ರಯತ್ನ ವಿಫಲವಾಗಿ ನಂತರ ಚೌಳಹಿರಿಯೂರಿನ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ವಾತಾವರಣ ತಿಳಿಯಾಯಿತು.