ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಈ ಬಾರಿ 23,454 ಹೊಸ ಮತದಾರರು

Rashmi Kasaragodu
Updated On : 8 Apr 2014, 11:39 am

ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಏ.7
ಲೋಕಸಭಾ ಚುನಾವಣೆಯ ಮತದಾರರ ಪಟ್ಟಿ ಜಿಲ್ಲೆಯಲ್ಲಿ ಅಂತಿಮಗೊಂಡಿದ್ದು, ಈ ಬಾರಿ ಹೊಸದಾಗಿ 23,454 ಹೆಸರು ಸೇರ್ಪಡೆಗೊಂಡಿದೆ.
ಜಿಲ್ಲೆಯ 7 ತಾಲೂಕುಗಳಲ್ಲಿ ಈ ಹಿಂದಿದ್ದ ಮತದಾರರ ಸಂಖ್ಯೆ 8,38,894, ಹೊಸದಾಗಿ ಮತದಾರರು ಸೇರ್ಪಡೆಗೊಂಡಿದ್ದರಿಂದ ಈ ಸಂಖ್ಯೆ 8,62,348ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಸೋಮವಾರ ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಿದರು.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿವೆ. ಇನ್ನುಳಿದ ಒಂದು ಕ್ಷೇತ್ರ ಹಾಸನ ಜಿಲ್ಲೆಗೆ ಒಳಪಡಲಿದ್ದು, ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಹಾಗೂ ತರೀಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ 6,74,982, ಕಡೂರು ಕ್ಷೇತ್ರದಲ್ಲಿ 1,87,366 ಮತದಾರರು ಇದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ 1,168 ಮತಗಟ್ಟೆಗಳಿವೆ. ಇಲ್ಲಿ ಕರ್ತವ್ಯ ನಿರ್ವಹಿಸಲು ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 5,653 ಸಿಬ್ಬಂದಿನೇಮಕಾತಿ ಮಾಡಿಕೊಳ್ಳಲಾಗಿದೆ. ಇವರಲ್ಲಿ 510 ಮೈಕ್ರೋ ಅಬ್ಸರ್‌ವರ್ಸ್, 2,390 ಪೊಲೀಸ್ ಸಿಬ್ಬಂದಿ ಮತ್ತು 649 ವಾಹನ ಚಾಲಕ- ಸಹಾಯಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅವರಿಗೆ ಸೇವಾ ಮತಪತ್ರ ಕಳುಹಿಸಿಕೊಡಲಾಗಿದೆ. ಈಗಾಗಲೇ ಸಿಬ್ಬಂದಿಗೆ ಮೊದಲ ಹಂತದ ತರಬೇತಿ ನೀಡಲಾಗಿದ್ದು, ಎರಡನೇ ಹಂತದ ತರಬೇತಿಯನ್ನು ಏ. 10ರಂದು ನೀಡಲಾಗುವುದು ಎಂದರು.
ವಿವಿಧ ತಂಡ: ನೀತಿ ಸಂಹಿತೆ ಜಾರಿಗಾಗಿ ವಿವಿಧ ತಂಡ ರಚನೆ ಮಾಡಲಾಗಿದೆ. ಹಾಗೆಯೇ ವಿಧಾನಸಭಾ ಕ್ಷೇತ್ರವಾರು ಚೆಕ್  ಪೋಸ್ಟ್‌ಗಳಿಗೆ ನೇಮಕಾತಿ ಮಾಡಿರುವ ಸ್ಥಿರ ಕಣ್ಗಾವಲು ತಂಡಗಳ ಮೇಲ್ವಿಚಾರಣೆಗಾಗಿ ಚಿಕ್ಕಮಗಳೂರು- ಮೂಡಿಗೆರೆ, ಕಡೂರು- ತರೀಕೆರೆ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಒಟ್ಟು 3 ನೋಡಲ್ ಅಧಿಕಾರಿಗಳ ತಂಡ ರಚಿಸಲಾಗಿದೆ. ಈ ಚೆಕ್‌ಪೋಸ್ಟ್‌ಗಳಲ್ಲಿ ಕೆಎಸ್ಸಾರ್ಟಿಸಿಯಿಂದ ಓರ್ವರನ್ನು ಇಲ್ಲಿಗೆ ನಿಯೋಜನೆ ಮಾಡಲಾಗಿದೆ ಎಂದರು.
ನೀತಿ ಸಂಹಿತೆ ಜಾರಿಯಾದ ದಿನದಿಂದ ಇಂದಿನವರೆಗೆ ಅಬಕಾರಿ ಜಾಗೃತದಳ 332 ಕಡೆಗಳಲ್ಲಿ ದಾಳಿ ನಡೆಸಿದೆ. 98 ಪ್ರಕರಣಗಳು ದಾಖಲಾಗಿದ್ದು, 63 ಜನರನ್ನು ಬಂಧಿಸಲಾಗಿದೆ. 178 ಲೀಟರ್ ಅಕ್ರಮ ಮದ್ಯ ಹಾಗೂ 4 ವಾಹನ ವಶಕ್ಕೆ ತೆಗೆದುಕೊಳ್ಳಲಾಗಿದೆ. ಎಂಸಿಸಿ ತಂಡ 4, ಎಸ್‌ಎಸ್‌ಟಿ ತಂಡ 1 ಹಾಗೂ ಎಂಸಿ-ಎಂಸಿ ತಂಡ 3 ಪ್ರಕರಣ ದಾಖಲಾಗಿದೆ ಎಂದರು.
ಮತದಾನದ ವಿವರ: ಏ. 17 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಅಂದು ಬೆಳಗ್ಗೆ ಮತದಾನ ಪ್ರಾರಂಭಕ್ಕೆ ಅರ್ಧಗಂಟೆ ಮೊದಲು ಹಾಜರಿದ್ದವರ ಸಮ್ಮುಖದಲ್ಲಿ ಅಣಕು ಮತದಾನ ನಡೆಸಲಾಗುವುದು.
ಮತದಾನ ಮಾಡಲು ಮತದಾರರು ಆಯೋಗವು ಸೂಚಿಸಿರುವ 11 ಪುರಾವೆಗಳನ್ನು ಯಾವುದಾದರೂ ಒಂದನ್ನು ಮತದಾನ ಮಾಡಲು ಕಡ್ಡಾಯವಾಗಿ ತರಬೇಕು. ಮತದಾನದ ದಿನದಂದು ಆಯ್ದ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯ ಆಗುಹೋಗು
ಗಮನಿಸಲು ವೆಬ್‌ಕಾಸ್ಟಿಂಗ್ ಮತ್ತು ವೀಡಿಯೋ ಕವರೇಜ್ ವ್ಯವಸ್ಥೆ ಮಾಡಲಾಗುವುದು ಹಾಗೂ ಸೂಕ್ಷ್ಮ, ಅತಿಸೂಕ್ಷ್ಮ, ವಲ್ನರೆಬಲ್, ಕ್ರಿಟಿಕಲ್ ಮತ್ತು ನಕ್ಸಲ್ ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್‌ವರ್ ನೇಮಕ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.


ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ



ಶೃಂಗೇರಿ      1,53,969
ಮೂಡಿಗೆರೆ       1,56,935
ಚಿಕ್ಕಮಗಳೂರು     1,97,554
ತರೀಕೆರೆ         1,66,524
ಕಡೂರು       1,87,366
ಒಟ್ಟು      8,62,348

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement