ನೆಮ್ಮದಿ ಬಾಳಿಗೆ ಧರ್ಮ ಅವಶ್ಯ: ರಂಭಾಪುರಿ ಶ್ರೀ
ತರೀಕೆರೆ: ಸುಖ, ಶಾಂತಿ ಮತ್ತು ನೆಮ್ಮದಿ ಬದುಕಿಗೆ ಧರ್ಮ ಪರಿಪಾಲನೆ ಅತ್ಯಂತ ಅವಶ್ಯವಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ.
ಸಮೀಪದ ಹುಣಸಘಟ್ಟ ಹಾಲುಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯರ ಜನ್ಮ ಸುವರ್ಣ ಮಹೋತ್ಸವ ಹಾಗು ಪಟ್ಟಾಧಿಕಾರ ರಜತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಂತೋಷ ತಂದಿದೆ: ಬಸವಲಿಂಗ ಶಿವಾಚಾರ್ಯರಿಂದ ಶ್ರೀಮಠದ ಗುರುತ್ವಾಧಿಕಾರ ಸ್ವೀಕರಿಸಿ ಇಪ್ಪತ್ತೈದು ವರ್ಷ ತುಂಬಿರುವ ಈ ಸಂದರ್ಭದಲ್ಲಿ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ತಮಗೆ ಸಂತೋಷ ತಂದಿದೆ ಎಂದರು.
ಸಾಧನೆ: ಉಜ್ಜಯನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಮಾನವ ಧರ್ಮದ ಹಿರಿಮೆಗೆ ಪಂಚ ಪೀಠಗಳ ಧಾರ್ಮಿಕ ಪರಂಪರೆಯ ಕೊಡುಗೆ ಅತ್ಯಂತ ವಿಶಿಷ್ಟವಾದುದು. ಗುರುಮೂರ್ತಿ ಶಿವಾಚಾರ್ಯರ ಸಾಧನೆ ಅಪೂರ್ವವಾದುದು ಎಂದರು.
ಪೀಠಾಧ್ಯಕ್ಷರಾದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ತಮ್ಮ ಪೀಠದ ಗೌರವ, ಗುರುರಕ್ಷೆ ನೀಡಿ ಆಶೀರ್ವದಿಸಲಾಯಿತು.
ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಶಂಕರಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಸಿ.ರುದ್ರಪ್ಪ, ಶೈಲಜ ದಂಪತಿಗಳು ಹಾಲುಸ್ವಾಮಿ ಮಠದಲ್ಲಿ ಮಾಡಿದ ಸೇವೆ ಸ್ಮರಿಸಿ ಗುರು ರಕ್ಷೆ ನೀಡಿ ಆಶೀರ್ವದಿಸಲಾಯಿತು. ಶಾಲಾ ಕಟ್ಟಡ, ನೂತನ ದೇವಾಲಯ ಮತ್ತು ಸಮುದಾಯ ಸಭಾ ಭವನದ ಲೋಕಾರ್ಪಣೆ ಮಾಡಲಾಯಿತು. ಮುನೇಶ್ವರ ಶಿವಾಚಾರ್ಯ ಸ್ವಾಮೀಜಿ ನಿರೂಪಿಸಿದರು.