ಮೂಲ ಸೌಕರ್ಯ ಕಲ್ಪಿಸದಿದ್ದರೆ ಚುನಾವಣೆ ಬಹಿಷ್ಕಾರ
ಮೂಡಿಗೆರೆ: ತಾಲೂಕಿನ ಊರುಬಗೆ ಗ್ರಾಪಂ ವ್ಯಾಪ್ತಿಯ ಮಡ್ಡಿಕೆರೆ ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ರಾಜಕೀಯ ಪಕ್ಷಗಳು ಹಸ್ತಕ್ಷೇಪ ಮಾಡುತ್ತಿವೆ ಎಂದು ಆರೋಪಿಸಿ ಗ್ರಾಮಸ್ಥರು ಈ ಬಾರಿ ನಡೆಯುವ ಲೋಕಸಭಾ ಚುನಾವಣೆಗೆ ಬಹಿಷ್ಕಾರ ಹಾಕಿದ್ದಾರೆ.
ಮಡ್ಡಿಕೆರೆಯಲ್ಲಿ ಸುಮಾರು 33 ಮನೆಗಳಿವೆ. 180ಕ್ಕೂ ಹೆಚ್ಚು ಮಂದಿ ಮತದಾರಿದ್ದಾರೆ. ಈ ಗ್ರಾಮದಲ್ಲಿ ಕಡಿಮೆ ಮತದಾರರು ಇದ್ದಾರೆ ಎಂಬ ಕಾರಣಕ್ಕೆ ಇಲ್ಲಿಯವರೆಗೆ ರಸ್ತೆ ಸೌಲಭ್ಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮಕ್ಕೆ ಇಲ್ಲಿವರೆಗೆ ಬಸ್ ಸೌಕರ್ಯವಿಲ್ಲ. ರಸ್ತೆ ಕಿರಿದಾಗಿ ಇರುವುದರ ಜೊತೆಗೆ ಗುಂಡಿಗಳಿಂದ ಕೂಡಿದ್ದರಿಂದ ವಾಹನಗಳ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.
ಎಚ್ಚರಿಕೆ: ಈ ಗ್ರಾಮದಿಂದ ತುರ್ತು ಪರಿಸ್ಥಿತಿಯ ರೋಗಿಗಳು ಆಸ್ಪತ್ರೆಗೆ ಹೋಗಬೇಕೆಂದರೆ ಕಷ್ಟವಾಗುತ್ತದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಹೇಮಾವತಿ ನದಿಯಲ್ಲಿ ನೀರು ನಿಲುಗಡೆಗೊಳಿಸಲು ಚೆಕ್ ಡ್ಯಾಂ ಇಲ್ಲವೇ ಇಲ್ಲ. ಇದರಿಂದ ಕುಡಿಯುವ ನೀರು ಹಾಗೂ ಕೃಷಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಆಗಾಗ ವಿದ್ಯುತ್ ಕಡಿತ ಪರಿಣಾಮ ಇದ್ದ ನೀರನ್ನೂ ಸರಬರಾಜು ಮಾಡಲು ಅಡ್ಡಿಯಾಗುತ್ತಿದೆ. ಈ ಕುರಿತು ಗ್ರಾಮಸ್ಥರು ನಿಯೋಗದೊಂದಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಈಗಾಗಲೇ ನಾವು ಘೋಷಿಸಿರುವ ಚುನಾವಣೆ ಬಹಿಷ್ಕಾರ ಹಿಂಪಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ನಾಗೇಶ್ ಗೌಡ, ಭರತ್, ಅರುಣ್, ಲಕ್ಷ್ಮಣಗೌಡ, ನಂಜುಂಡೇಗೌಡ, ಎಂ.ಪಿ. ಮಂಜುನಾಥ್, ಎಂ.ಎಸ್. ಬಾಸೇಗೌಡ, ಕೃಷ್ಣೇಗೌಡ, ಪುಷ್ಪ, ಪುಟ್ಟಮ್ಮ, ರತ್ನಮ್ಮ, ಶಾಂತಮ್ಮ ಮತ್ತಿತರರು ಇದ್ದರು.