ಮೋಟಮ್ಮ ಮನೆ ಮೇಲೆ ದಾಳಿ
ಮೂಡಿಗೆರೆ: ಅಕ್ರಮ ಮದ್ಯದ ಬಾಟಲಿಗಳು ಹಾಗೂ ಲಕ್ಷಾಂತರ ಹಣ ಸಂಗ್ರಹಿಟ್ಟಿರುವ ಬಗ್ಗೆ ಕಂಟ್ರೋಲ್ ರೂಂಗೆ ಬಂದ ಕರೆಯನ್ವಯ ತಹಸೀಲ್ದಾರ್ ನೇತೃತ್ವದಲ್ಲಿ ಚುನಾವಣಾ ಸಂಚಾರಿ ದಳದ ಅಧಿಕಾರಿಗಳು ವಿಧಾನಪರಿಷತ್ ಸದಸ್ಯೆ ಡಾ.ಮೋಟಮ್ಮ ಅವರ ಮನೆ ಮೇಲೆ ಸೋಮವಾರ ದಾಳಿ ನಡೆಸಿ ಪರಿಶೀಲಿಸಿದರು.
ಬೆಳಗ್ಗೆ 10 ಗಂಟೆಗೆ ಬಂದ ಕರೆ ಸ್ವೀಕರಿಸಿದ ಅಧಿಕಾರಿಗಳು 10 ನಿಮಿಷದಲ್ಲಿ ತಹಸೀಲ್ದಾರ್ ಶಾರದಾಂಬ ನೇತೃತ್ವದಲ್ಲಿ ಸಂಚಾರಿ ದಳದ ವಿಶೇಷ ದಂಡಾಧಿಕಾರಿ ರವೀಂದ್ರ, ಸದಸ್ಯ ಅಬಕಾರಿ ಅಧಿಕಾರಿ ರವೀಶ್ ನೇತೃತ್ವದ ತಂಡ ದಾಳಿ ನಡೆಸಿದು. ಆಗ ಡಾ. ಮೋಟಮ್ಮ ಮತ್ತು ತಹಸೀಲ್ದಾರ್ ನಡುವೆ ವಾದ- ವಿವಾದವೂ ನಡೆಯಿತು.
ವಾದಕ್ಕೆ ಮಣಿಯದ ತಹಸೀಲ್ದಾರರು ಚುನಾವಣಾ ಆಯೋಗದ ಆದೇಶವಿರುವುದಾಗಿ ತಿಳಿಸಿ, ಮೋಟಮ್ಮ ಅವರ ಮನೆಯಲ್ಲಿ ಶೋಧ ಕಾರ್ಯ ಕೈಗೊಂಡರು.
ಆಯೋಗದ ಸದಸ್ಯರು ಮನೆ ಪರಿಶೀಲಿಸಿದಾಗ ಅಲ್ಲಿ ಯಾವುದೇ ರೀತಿಯ ಮದ್ಯದ ಬಾಟಲಿಗಳು ಮತ್ತು ಹಣ ದೊರೆಯದೆ ಹಿಂದಿರುಗಿದರು. ತಂಡದ ಜೊತೆಯಲ್ಲಿದ್ದ ವೀಡಿಯೋ ಗ್ರಾಫರ್ ಮತ್ತು ಪತ್ರಕರ್ತರಿಗೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ನಿರ್ಬಂಧ ಹೇರುವುದರೊಂದಿಗೆ ಮನೆಯ ಒಳಗಿನ ಬಾಗಿಲು ಹಾಕಿಕೊಂಡರು.