ಹಣ, ಅಧಿಕಾರ ಶಾಶ್ವತವಲ್ಲ
ನರಸಿಂಹರಾಜಪುರ: ಹಣ, ಅಧಿಕಾರ ಯಾವಾಗಲೂ ಶಾಶ್ವತವಲ್ಲ. ಹಣ ಇದೆ ಎಂದು ಯಾರಾದರೂ ಅಹಂಕಾರ ಪಟ್ಟರೆ ಅವರು ಸರ್ವನಾಶವಾಗುತ್ತಾರೆ ಎಂದು ಹರಿಹರಪುರ ಶ್ರೀಮಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ತಿಳಿಸಿದರು.
ಇಲ್ಲಿನ ಹಳೇ ಪೇಟೆಯ ಗುತ್ಯಮ್ಮ ದುರ್ಗಾ ಪರಮೇಶ್ವರಿ ಟ್ರಸ್ಟ್ ವತಿಯಿಂದ ಸೋಮವಾರ ಗುತ್ಯಮ್ಮದೇವಿ ಮತ್ತು ಪರಿಹಾರ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಆರ್ಶೀವಾಚನ ನೀಡಿದರು.
ಒಂದು ಕುಟುಂಬದ ಸದಸ್ಯರು ಆರೋಗ್ಯ, ನೆಮ್ಮದಿ, ಶಾಂತಿಯಿಂದ ಇರಬೇಕಾದರೆ ಮನೆಯ ಎಲ್ಲಾ ಸದಸ್ಯರ ಮನಸ್ಸು ಶುದ್ಧವಾಗಿರಬೇಕು. ದೇವರಲ್ಲಿ ನಂಬಿಕೆ ಇಟ್ಟುಕೊಂಡಿರಬೇಕು. ಪ್ರತಿಯೊಬ್ಬರು ಶುದ್ಧ ಮನಸ್ಸಿನಿಂದ ದೇವರನ್ನು ಪ್ರಾರ್ಥಿಸಿದರೆ ದೇವರು ಒಲಿಯುತ್ತಾನೆ ಎಂದು ಅವರು ತಿಳಿಸಿದರು.
ಮನಸ್ಸು ಶುದ್ಧವಾಗಿರಲಿ: ನಾವು ಎಷ್ಚೇ ಉನ್ನತ ಸ್ಥಾನಕ್ಕೆ ಏರಿದರೂ ಮನೆಯಲ್ಲಿರುವ ಹಿರಿಯರು, ತಂದೆ- ತಾಯಿಯನ್ನು ನಿರ್ಲಕ್ಷ್ಯ ಮಾಡಿದರೆ ದೇವರು ಮೆಚ್ಚುವುದಿಲ್ಲ. ಮನೆಯಲ್ಲಿ ಹಿರಿಯರಿಗೆ ಗೌರವ ಕೊಡದೆ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರೆ ಅಥವಾ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಲಕ್ಷಾಂತರ ರು. ಖರ್ಚು ಮಾಡಿದರೆ ಪ್ರಯೋಜನವಿಲ್ಲ.ದೇವರಿಗೆ ಬಡವ, ಶ್ರೀಮಂತ ಎಂಬ ಭೇದಭಾವ ಮಾಡದೆ ಎಲ್ಲರನ್ನು ಸರಿಸಮನಾಗಿ ನೋಡುತ್ತಾನೆ.
ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಯಾರ ಮನಸ್ಸಿಗೂ ನೋವು ಮಾಡದೆ ನಮ್ಮ ಮನಸ್ಸನ್ನು ಯಾವಾಗಲೂ ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದರು.
ಗುತ್ಯಮ್ಮ ದುರ್ಗಾ ಪರಮೇಶ್ವರಿ ಟ್ರಸ್ಟ್ ಅಧ್ಯಕ್ಷ ಆರ್.ಸದಾಶಿವ, ನಾಗರಾಜ್ ಪುರಾಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಶಾಂತಕುಮಾರ್ ಸ್ವಾಗತಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳು ಆಗಮನಿಸಿದ ಸಂದರ್ಭ ಅವರನ್ನು ಪೂರ್ಣಕುಂಭದ ಮೂಲಕ ಸ್ವಾಗತಿಸಲಾಯಿತು.
ಧಾರ್ಮಿಕ ಕಾರ್ಯಕ್ರಮ: ಸೋಮವಾರ ಬೆಳಗ್ಗೆ ಕೊಪ್ಪ ತಾಲೂಕಿನ ಕರ್ಕಿಯ ತಂತ್ರಿ ರಮಾನಂದಭಟ್ ಹಾಗೂ ನ.ರಾ.ಪುರದ ವಿದ್ವಾನ್ ಎಸ್.ಕೃಷ್ಣಭಟ್ ನೇತೃತ್ವದಲ್ಲಿ ಗುತ್ಯಮ್ಮದೇವಿಯ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ನಡೆಯಿತು. ಮಹಾಪೂರ್ಣಾಹುತಿ ಹಾಗೂ ಕುಂಭಾಭಿಷೇಕದಲ್ಲಿ ಹರಿಹರಪುರ ಶ್ರೀಗಳು ಪಾಲ್ಗೊಂಡಿದ್ದರು.
ಸಂಜೆ ನಾಗಸುಬ್ರಮಣ್ಯ ದೇವರಿಗೆ ಆಶ್ಲೇಷ ಬಲಿ, ಮಹಾ ಮಂಗಳಾರತಿ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭದ್ರಾವತಿ ಸುಬ್ರಮಣ್ಯ ಮತ್ತು ತಂಡದವರಿಂದ ಭಕ್ತಿಸುಧೆ ಸುಗಮ ಸಂಗೀತ ನಡೆಯಿತು.