ಅಭಿರುಚಿಗೆ ತಕ್ಕ ಅಧ್ಯಯನ ಸಾಧನೆಗೆ ಪೂರಕ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಏ. 8
ಅಭಿರುಚಿಗೆ ತಕ್ಕ ಅಧ್ಯಯನ ಸಾಧನೆಗೆ ಪೂರಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದ್ದಾರೆ.
ನಗರದ ಶ್ರೀಮತಿ ಲಕ್ಷ್ಮೀದೇವಮ್ಮ ಕೆ. ಸೂರಪ್ಪಶೆಟ್ಟಿ ವೈಶ್ಯಾ ಹಾಸ್ಟೆಲ್‌ನಲ್ಲಿ ಗ್ರಾಮೀಣ ಪ್ರದೇಶದ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳ ಉಚಿತ ಊಟ, ವಸತಿ ಶಿಬಿರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಒಂದು ಸಂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಬದುಕಿನ ಬಹುದೊಡ್ಡ ತಿರುವು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಪೂರಕ ಸೌಲಭ್ಯ, ತರಬೇತಿ ಒದಗಿಸುವ ಕಾರ್ಯ 23 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವುದು ಸ್ತುತ್ಯಾರ್ಹ. ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವ ಪ್ರಯತ್ನ ಇಲ್ಲಿ ನಡೆದಿದೆ. ಈ ಹಂತದಲ್ಲೇ ಮುಂದಿನ ಬದುಕಿಗೆ ಸಿದ್ಧತೆ ಮಾಡಿಕೊಳ್ಳುವ ಸಂಕಲ್ಪ ಮಕ್ಕಳದ್ದಾಗಬೇಕು ಎಂದರು.
ಓದು ಗ್ರಹಿಕೆ ಅದನ್ನು ಪರೀಕ್ಷೆಯಲ್ಲಿ ಸರಿಯಾಗಿ ಬರೆಯುವ ಕ್ಷಮತೆ ಹೆಚ್ಚಿನ ಅಂಕ ತಂದುಕೊಡುತ್ತದೆ. ಸಕಾರಾತ್ಮಕ ಆಲೋಚನೆ ಬೆಳೆಸಿಕೊಳ್ಳಬೇಕು.
ಸಾಕಿ ಸಲಹುವ ತಂದೆ- ತಾಯಿಯರನ್ನು, ಶಿಕ್ಷಣ ಕಲಿಸುವ ಗುರುಗಳನ್ನು ನೋಯಿಸದಿರಿ. ಬದುಕು ಕಟ್ಟಿಕೊಳ್ಳಲು ನೆರವಾದವರನ್ನು ಮರೆಯದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ರಾಜೇಗೌಡ, ಹುಟ್ಟು- ಸಾವು, ಅಧಿಕಾರ ಸಿರಿವಂತಿಕೆ ಬಂದು ಹೋಗುತ್ತದೆ.
ಸಂತೋಷ ಹಂಚಿಕೊಳ್ಳುವುದರಿಂದ ಹೆಚ್ಚುತ್ತದೆ. ಒಳ್ಳೆಯ ಕೆಲಸ ಅದರಲ್ಲೂ ಶಿಕ್ಷಣಕ್ಕೆ ನೆರವು ನೀಡುವ ಇಂತಹ ಶಿಬಿರ ಆಯೋಜಿಸುವ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಲು ಪ್ರೇರಕರಾದ ರಮೇಶ್ ಮತ್ತು ಗಾಯಿತ್ರಿ ದಂಪತಿಗಳನ್ನು ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದಿಸಿದರು.
ಮುಖ್ಯ ವಿಶ್ವಸ್ಥರಾದ ಶಿಬಿರದ ರೂವಾರಿ ಕೆ.ಎಸ್. ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಮೇಶ್ ಸ್ವಾಗತಿಸಿ, ಅನಿತಾ ಶ್ರೀನಿವಾಸ್ ವಂದಿಸಿದರು.