ನಿಷೇಧ ಎಂದು ಅಡಕೆ ಮಾನ ಕಳೆದ ಬಿಜೆಪಿ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಏ.8
ತಮ್ಮ ವಿರುದ್ಧ ಟೀಕೆಗೆ ಬೇರಾವುದೇ ವಿಚಾರಗಳಿಲ್ಲ ಎಂಬ ಕಾರಣದಿಂದ ಅಡಕೆ ನಿಷೇಧ ಎಂಬ ಹಸಿ ಸುಳ್ಳನ್ನು ಹೇಳುವ ಮೂಲಕ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಮುಖಂಡರು, ದಾಖಲೆಗಳೊಂದಿಗೆ ಸಾಬೀತುಪಡಿಸಿದಲ್ಲಿ ತಾವು ರಾಜಕೀಯ ನಿವೃತ್ತಿ ಹೊಂದುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಸವಾಲು ಹಾಕಿದ್ದಾರೆ.
ಲಕ್ಯಾ ಮತ್ತು ಸಖರಾಯಪಟ್ಟಣದಲ್ಲಿ ಮಂಗಳವಾರ ನಡೆದ ಲೋಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಅಡಕೆ ಬೆಳೆಗಾರರಿಗೆ ತಮ್ಮ ಶ್ರಮದಿಂದಾಗಿ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗಿದೆ. ವಿದೇಶದಿಂದ ಆಮದಾಗುತ್ತಿದ್ದ ಅಡಕೆಯಿಂದಾಗಿ ನಮ್ಮ ದೇಶದ ಅಡಕೆಗೆ ಬೆಲೆ ಇಲ್ಲದಂತಾಗಿತ್ತು. ಈ ಬಗ್ಗೆ ಗಮನಹರಿಸಿ ಸಂಬಂಧಪಟ್ಟ ಸಚಿವರು ಮತ್ತು ಉನ್ನತಾಧಿಕಾರಿಗಳೊಂದಿಗೆ ಕೇಂದ್ರ ಸರ್ಕಾರದಲ್ಲಿ ಮಾತುಕತೆ ನಡೆಸಿದ ಪರಿಣಾಮ, ಆಮದು ಅಡಕೆಗೆ 250 ತೆರಿಗೆ ವಿಧಿಸಲು ಸರ್ಕಾರ ಕ್ರಮ ಕೈಗೊಂಡಿತು.
ಅದರಿಂದಾಗಿ ಆಮದು ಅಡಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ದೇಶೀಯ ಅಡಕೆ ಬೆಲೆ 8 ಸಾವಿರದಿಂದ 30 ಸಾವಿರಕ್ಕೆ ಜಿಗಿಯಿತು. ಇದು ಜಿಲ್ಲೆಯ ಬೆಳೆಗಾರರಿಗಲ್ಲದೆ ದೇಶದ ಎಲ್ಲ ಬೆಳೆಗಾರರಿಗೆ ಲಾಭ ಆಗಿದೆ ಎಂದರು.
ಪ್ಯಾಕೇಜ್ಗೆ ಅಡ್ಡಗಾಲು: ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಹಳದಿ ಎಲೆ ರೋಗ ಮತ್ತು ಕೊಳೆ ರೋಗದಿಂದ ಅಡಕೆ ಬೆಳೆ ತೀವ್ರ ಹಾನಿಗೊಂಡಿತ್ತು. ಅದನ್ನು ತಾವು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ಒತ್ತಡ ಹಾಕಿದ ಪರಿಣಾಮವಾಗಿ ಗೋರಕ್ಸಿಂಗ್ ಸಮಿತಿ ಜಿಲ್ಲೆಯ ಶೃಂಗೇರಿ, ಕೊಪ್ಪ, ಮೂಡಿಗೆರೆ ತಾಲೂಕುಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಸಂದರ್ಭದಲ್ಲಿ ಅಂದಿದ್ದ ಸಿಎಂ ಯಡಿಯೂರಪ್ಪ ಅವರು ರಾಜ್ಯದ ಎಲ್ಲ ಪ್ರದೇಶಗಳನ್ನು ಸೇರಿಸುವ ಮೂಲಕ ಪರಿಹಾರ ಪ್ಯಾಕೇಜ್ಗೆ ಅಡ್ಡಗಾಲಾದರು ಎಂದು ಆರೋಪಿಸಿದರು.
ಸುಳ್ಳು ಆರೋಪ: ತಾವು ಒಬ್ಬ ನ್ಯಾಯವಾದಿಯಾಗಿದ್ದು, ಅಡಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ಪ್ರಮಾಣ ಪತ್ರ ಸಲ್ಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆ ಪಡೆಯಲಾಗಿದೆ. ಅಡಕೆ ನಿಷೇಧದ ಬಗ್ಗೆ ಯಾವುದೇ ವಿಚಾರ ಇಲ್ಲ. ಅದು ಗುಟ್ಕಾ ನಿಷೇಧ ಮತ್ತು ಇತರೆ ವಿಚಾರಗಳಿಗೆ ಸಂಬಂಧಿಸಿದೆ.
ಆದರೆ, ಬಿಜೆಪಿ ಸುಳ್ಳು ಆರೋಪ ಮಾಡುವ ಮೂಲಕ ಚುನಾವಣೆಯಲ್ಲಿ ಲಾಭ ಪಡೆಯಲು ನಡೆಸಿರುವ ಹುನ್ನಾರ ಫಲಿಸುವುದಿಲ್ಲ. ಈ ಬಗ್ಗೆ ತಮ್ಮ ಬಳಿ ಸಾಕಷ್ಟು ದಾಖಲೆಗಳಿವೆ. ನಿಮ್ಮ ಬಳಿಯಲ್ಲಿ ದಾಖಲೆಗಳಿದ್ದರೆ ಸಾಬೀತುಪಡಿಸಿದಲ್ಲಿ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಹೇಳಿದರು.
ತನಿಖೆಗೆ ಸಿದ್ಧ: ವಿಧಾನಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಕರಗಡದ ದೇವಿಕೆರೆಯಿಂದ ಕುಡಿಯಲು ಬೆಳವಾಡಿ ಕೆರೆಗೆ ನೀರು ಹರಿಸುವ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ಮತ್ತು ಅಗತ್ಯ ಕ್ರಮ ಕೈಗೊಳ್ಳದ ಇಲ್ಲಿನ ಶಾಸಕರು ಈಗ 10.5 ಕೋಟಿ ಬಗ್ಗೆ ತನಿಖೆಯಾಗಲಿ ಎಂದು ಹೇಳುತ್ತಿದ್ದಾರೆ. ಅದಕ್ಕೆ ಯಾವುದೇ ತನಿಖೆಗೂ ಸಿದ್ಧವಾಗಿ ನಾವಿದ್ದೇವೆ. ಆದರೆ, ಅದಕ್ಕೆ ಮೊದಲು 800 ಕೋಟಿ ತಂದು ಕ್ಷೇತ್ರ ಅಭಿವೃದ್ಧಿಪಡಿಸಿರುವುದಾಗಿ ಜಂಬ ಕೊಚ್ಚಿಕೊಂಡು ಚುನಾವಣೆಯಲ್ಲಿ ಆರಿಸಿ ಬಂದಿರುವ ನೀವು 800 ಕೋಟಿ ಅನುದಾನದ ಬಗ್ಗೆ ತನಿಖೆ ಮಾಡಿಸಿ ಎಂದು ಸವಾಲೆಸೆದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಸ್. ಶಾಂತೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಗೇಗೌಡ, ಕಾರ್ಯದರ್ಶಿ ರತನ್ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್. ಚಂದ್ರಶೇಖರ್, ಉಪಾಧ್ಯಕ್ಷ ರವೀಶ್ ಕ್ಯಾತನಬೀಡು, ನಗರಸಭೆ ಸದಸ್ಯ ಎಚ್.ಎಸ್. ಪುಟ್ಟಸ್ವಾಮಿ ಹಾಗೂ ಪಕ್ಷದ ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.