ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಡತನ ಮುಕ್ತ ದೇಶವಾಗಿಸಲು ಮುಂದಾಗಿ

Rashmi Kasaragodu
Updated On : 9 Apr 2014, 10:42 am

ಕ.ಪ್ರ.ವಾರ್ತೆ    ಚಿಕ್ಕಮಗಳೂರು    ಏ. 8
ಬಡವರು, ಮಧ್ಯಮ ವರ್ಗದವರು ಮತ್ತು ಹಿಂದುಳಿದವರನ್ನು ಆರ್ಥಿಕವಾಗಿ ಸಬಲಗೊಳಿಸುವ ಮೂಲಕ ಭಾರತವನ್ನು ಬಡತನ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಮುಂದಾಗುವಂತೆ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಬ್ಯಾಂಕ್‌ಗಳಿಗೆ ಕರೆ ನೀಡಿದ್ದಾರೆ.
ನಗರದ ರತ್ನಗಿರಿ ರಸ್ತೆಯಲ್ಲಿ ಸೋಮವಾರ ಸ್ಥಳಾಂತರಗೊಂಡ ಕೆನರಾ ಬ್ಯಾಂಕ್, ಬಸವನಹಳ್ಳಿ ನೂತನ ಶಾಖೆ ಉದ್ಘಾಟಿಸಿ ಮಾತನಾಡಿ, ಬ್ಯಾಂಕ್‌ಗಳು ಎಲ್ಲಾ ವರ್ಗದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚಿರುವ ಸ್ಥಳಗಳಲ್ಲಿ ಬ್ಯಾಂಕುಗಳು ಶಾಖೆ ತೆರೆಯಬೇಕು. ಸರ್ಕಾರದ ಕಾರ್ಯಕ್ರಮಗಳನ್ನು ಶೇ. 100 ರಷ್ಟು ಅವರಿಗೆ ತಲುಪಿಸುವ ಮೂಲಕ ಅವರನ್ನು ಆರ್ಥಿಕವಾಗಿ ಮೇಲೆತ್ತಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆನರಾ ಬ್ಯಾಂಕ್‌ನ ಶಿವಮೊಗ್ಗ ವೃತ್ತ ಕಚೇರಿಯ ಉಪ ಮಹಾಪ್ರಬಂಧಕ ಎಂ.ಎಂ. ಚಿನಿವಾರ್, ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಬ್ಯಾಂಕನ್ನು ಇನ್ನು 15 ದಿನಗಳಲ್ಲಿ ನಗರದಲ್ಲಿ ತೆರೆಯಲಿದ್ದು, ಗ್ರಾಹಕರು ಯಾವ ವೇಳೆಯಲ್ಲಾದರೂ ಬ್ಯಾಂಕ್‌ಗೆ ಆಗಮಿಸಿ ವ್ಯವಹರಿಸಬಹುದು ಎಂದು ತಿಳಿಸಿದರು.
ಕೇವಲ ಆದಾಯಪತ್ರ ಪಡೆದು ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನೀಡುವ ಕೆಲಸವನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಹೇಳಿದರು.
ಬ್ಯಾಂಕ್‌ನ ವಿಭಾಗೀಯ ವ್ಯವಸ್ಥಾಪಕ ಹರಿದಾಸ್ ಶೆಣೈ, ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಜಿಲ್ಲಾ ಗೌರವಾಧ್ಯಕ್ಷ ಬಿ.ಎಚ್. ನರೇಂದ್ರ ಪೈ, ಕಾಫಿ ಬೆಳೆಗಾರ ಎಚ್.ಡಿ. ರಾಮೇಗೌಡ ಉಪಸ್ಥಿತರಿದ್ದರು.
ಬ್ಯಾಂಕ್‌ನ ಅಧಿಕಾರಿ ಕವಿತಾ ನಿರೂಪಿಸಿದರು. ಶಾಖಾ ಪ್ರಬಂಧಕ ಬಿ. ರಮಾಕಾಂತ್ ಯಾಧವ್ ಸ್ವಾಗತಿಸಿದರು. ಮಮತ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement