ಬಿಎಸ್‌ವೈಗೆ ಮತ ನೀಡಿದರೆ ಒಕ್ಕಲಿಗಲಿಗರಿಗೇ ಹೆಮ್ಮೆ: ತೇಜಸ್ವಿನಿ
ಶಿವಮೊಗ್ಗ: ರಾಜಕೀಯದ ಎರಡನೇ ಇನ್ನಿಂಗ್ಸ್‌ನಲ್ಲಿ ಯಡಿಯೂರಪ್ಪನವರು ಗೆಲ್ಲಲು ಕ್ಷೇತ್ರದ ಜನರು ಮತ ನೀಡಬೇಕು. ಅದೇ ರೀತಿ, ಬಿಜೆಪಿ ಹಾಗೂ ಯಡಿಯೂರಪ್ಪನವರಿಗೆ ಮತ ನೀಡುವುದು ಒಕ್ಕಲಿಗರಿಗೆ ಹೆಮ್ಮೆಯ ವಿಷಯ ಎಂದು ಮಾಜಿ ಸಂಸದೆ ತೇಜಸ್ವಿನಿ ಗೌಡ ಪ್ರತಿಪಾದಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯು ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ನೀಡಿದೆ. ಡಿ.ವಿ. ಸದಾನಂದಗೌಡರನ್ನು ಮುಖ್ಯಮಂತ್ರಿಯನ್ನಾಗಿ ಆರ್. ಅಶೋಕ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಿತು ಎಂದು ಹೇಳಿದರು. ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಎಲ್ಲಾ ವರ್ಗದ ಜನರಿಗೆ ಆದ್ಯತೆ ನೀಡಿದ್ದಾರೆ. ಇದರಿಂದಾಗಿಯೇ ಜನನಾಯಕರಾಗಿ ಹೊರ ಹೊಮ್ಮಲು ಸಾದ್ಯವಾಯಿತು ಎಂದ ಅವರು, ಯಡಿಯೂರಪ್ಪ ಸಂಸದರಾದರೆ ರಾಷ್ಟ್ರ ರಾಜಕಾರಣದಲ್ಲಿ ಮೋದಿ ಅವರೊಂದಿಗೆ ಅಭಿವೃದ್ಧಿ ಕೆಲಸಗಳಲ್ಲಿ ಭಾಗಿಯಾಗುತ್ತಾರೆ. ಇದರಿಂದ ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಯೂ ಸಾಧ್ಯ ಎಂದರು. ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ನಾಯಕತ್ವ ತುಳಿಯಲು ಕಾಂಗ್ರೆಸ್ ಷಡ್ಯಂತ್ರ ರೂಪಿಸಿತ್ತು ಎಂದು ಆರೋಪಿಸಿದ ಅವರು, ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಇಲ್ಲವಾಗಿದೆ. ಜೆಡಿಎಸ್‌ನ ರೂಪಾಂತರವೇ ಕಾಂಗ್ರೆಸ್ ಆಗಿದೆ ಎಂದರು.
ಕಾವಳಿ ಜಾತ್ರಾ ಮಹೋತ್ಸವ
ತರೀಕೆರೆ: ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಂಗುನಿ ಉತ್ತರ ತೀರ್ಥ ಕಾವಳಿ ಜಾತ್ರಾ ಮಹೋತ್ಸವವನ್ನು ಏರ್ಪಡಿಸಲಾಗಿತ್ತು. ಅರಸೀಕೆರೆ ಮಾಡಾಳು ತೋಂಟದಾರ್ಯ ಸ್ವಾಮಿಗಳು ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿದ್ದರು. ಶ್ರೀ ದವತ್ತಿರು ಭದ್ರಗಿರಿ ಮಹಾಸ್ವಾಮಿಯವರು ಜಾತ್ರೆಗೆ ಚಾಲನೆ ನೀಡಿದರು. ವಿಶ್ವ ಹಿಂದೂ ಪರಿಷತ್ ರಾಜ್ಯ ಕಾರ್ಯದರ್ಶಿ ಎಚ್.ರಾಮಪ್ಪ ಮಾತನಾಡಿದರು. ಜಾತ್ರೆಯ ಪ್ರಯುಕ್ತ ಅಂದು ಶ್ರೀ ಶಿಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಪೂಜೆ ಗಣ ಹೋಮ ನೆರವೇರಿಸಲಾಯಿತು.
ಉಪೇಂದ್ರ, ಶಿವಣ್ಣ ರೋಡ್ ಶೋ
ಸಾಗರ: ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರವಾಗಿ ಚಲನಚಿತ್ರ ನಟರಾದ ಉಪೇಂದ್ರ ಹಾಗೂ ಶಿವರಾಜಕುಮಾರ್ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ಮಧು ಬಂಗಾರಪ್ಪ, ಪ್ರಮುಖ ಶ್ರೀಪಾದ ನಿಸ್ರಾಣಿ, ಬಸವರಾಜಗೌಡ ಬೈದೂರು, ಜಾಕೀರ್, ಕೆ.ಎಚ್. ಅಣ್ಣಪ್ಪ, ಲೋಕೇಶ ಗಾಳಿಪುರ ಹಾಜರಿದ್ದರು.