ರಾಜ್ಯದ ಜನತೆಗೆ ವಿದ್ಯುತ್ ಸ್ಪ್ರೇ: ಎಚ್ಡಿಕೆ ಆರೋಪ
ಶಿವಮೊಗ್ಗ: ಸಂಸದರೊಬ್ಬರು ಸಂಸತ್ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲೇ ಪೆಪ್ಪರ್ ಸ್ಪ್ರೇ ಮಾಡಿದರು. ಇತ್ತ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಮೇಲೆ ವಿದ್ಯುತ್ ಸ್ಪ್ರೇ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದು, ಉಡುಪಿ ಶಾಖೋತ್ಪನ್ನ ಕೇಂದ್ರದಿಂದ ವಿದ್ಯುತ್ ಖರೀದಿ ಸಂದರ್ಭದಲ್ಲಿ ಸಿದ್ದರಾಮಯ್ಯ 300 ಕೋಟಿ ಅಡ್ವಾನ್ಸ್ ಪಡೆದಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಆರೋಪ ಮಾಡಿದರು. ಉಡುಪಿಯ ಶಾಖೋತ್ಪನ್ನ ಕೇಂದ್ರದಿಂದ ಉತ್ಪಾದನೆಯಾಗುವ ವಿದ್ಯುತ್ತನ್ನು 2006ರಿಂದ ಯೂನಿಟ್ಗೆ 2 ನಂತೆ ಖರೀದಿಸಲಾಗುತ್ತಿತ್ತು. ಆದರೆ ಸಿದ್ದರಾಮಯ್ಯ ಅವರು ಈ ದರವನ್ನು 4.15ಕ್ಕೆ ಹೆಚ್ಚಿಸಿದ್ದಾರೆ. ಇದಕ್ಕೆ ಪ್ರತಿಫಲವಾಗಿ 300 ಕೋಟಿ ಅಡ್ವಾನ್ಸ್ ಪಡೆದಿದ್ದಾರೆ ಎಂದರು.
ವಿದ್ಯುತ್ ಖರೀದಿ ದರ ಹೆಚ್ಚಿಸಿರುವ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ವಿದ್ಯುತ್ ಸ್ಪ್ರೇ ಮಾಡಲು ಹೊರಟಿದ್ದಾರೆ ಎಂದರು.
ಇದಕ್ಕೆ ಸಂಬಂಧಪಟ್ಟ ದಾಖಲೆಗಳೂ ನನ್ನ ಬಳಿ ಇವೆ. ಬಿಡುಗಡೆ ಮಾಡುವುದಕ್ಕೆ ಸಿದ್ಧ ಎಂದರು.