ಕಾಲುವೆ ನವೀಕರಣ ಕಾಮಗಾರಿ ಪರಿಶೀಲನೆ
ಕನ್ನಡಪ್ರಭ ವಾರ್ತೆ ಹುಣಸಗಿ ಏ.9
ನಾರಾಯಣಪುರ ಎಡದಂಡೆ ನಾಲೆಯ ನವೀಕರಣ ಕಾಮಗಾರಿ 56 ಕಿಮೀ ಸ್ಥಳಕ್ಕೆ ವ್ಯವಸ್ಥಾಪಕ ನಿರ್ದೇಶಕ ಕಪಿಲ್ ಮೋಹನ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.
ಕಾಲುವೆಯ ನವೀಕರಣಕ್ಕೆ ಪ್ರತಿ 2 ಕಿಮೀನ ಕಾಮಗಾರಿ ನಿರ್ವಹಣೆಯ ತಂಡ ರಚಿಸಲಾಗಿದ್ದು, ಪ್ರತಿ ತಂಡದಲ್ಲಿ ಆರು ಪೋಕ್ಲೇನ್, ಒಂದು ಡೋಜರ್, ಎರಡು ವೈಬ್ರೇಟೆರ್ ರೂಲರ್‌ಗಳು, ಒಂದು ಕಾಂಕ್ರೀಟ್ ಲೈನಿಂಗ್ ಮಷಿನ್, ಎರಡು ವಾಟರ್ ಟ್ಯಾಂಕರ್, 28 ಕೆವಿ ವಿದ್ಯುತ್ ಜನರೇಟರ್, ಉಸುಕು, ಕಂಕರ್, ಪ್ಲಾಸ್ಟಿಕ್ ಮಿಕ್ಸಿಂಗ್ ಪ್ಲ್ಯಾಂಟ್, ಸಿಮೆಂಟ್ ಸಂಗ್ರಹಿಸಿ ಇಡಲಾಗಿದೆ ಎಂದು ಗುತ್ತಿಗೆದಾರ ಶರಣಗೌಡ ವ್ಯವಸ್ಥಾಪಕ ನಿರ್ದೇಶಕರಿಗೆ ಮನವರಿಕೆ ಮಾಡಿ ಕೊಟ್ಟರು.
ನಂತರ ಸುದ್ದಿಗಾರರರೊಂದಿಗೆ ಮಾತನಾಡಿದ ಕಪಿಲ್ ಮೋಹನ್, ಸುಮಾರು ಮೂರು ದಶಕಗಳಷ್ಟು ಹಳೆಯ ಮುಖ್ಯ ಕಾಲುವೆ ಇದಾಗಿತ್ತು. ಪದೇ ಪದೆ ಕಾಲುವೆ ಕುಸಿತ, ಬಿರುಕು, ಇದರಿಂದ ಇಂಡಿ, ಸಿಂದಗಿ, ಜೇವರ್ಗಿ, ಶಹಾಪುರ ಸೇರಿದಂತೆ 4 ಲಕ್ಷ ಎಕರೆ ಪ್ರದೇಶದಲ್ಲಿ ಆಗಾಗ ಕಾಲುವೆ ಹರಿವು ನಿಂತು ರೈತನ ಫಸಲಿನಲ್ಲಿ ವ್ಯತ್ಯಯ ಉಂಟಾಗುತ್ತಿತ್ತು.
ಗುಣಮಟ್ಟದಲ್ಲಿ ರಾಜಿಯಿಲ್ಲ: ಕಾಲುವೆಯ ನವೀಕರಣದ ಕಾರ್ಯವನ್ನು ನಿಗಮವು ಸರ್ಕಾರಕ್ಕೆ ಮನವರಿಕೆ ಮಾಡಿ ಕೊಟ್ಟಿತ್ತು. ಈ ಬಾರಿ ಕಾಲವೆ ನವೀಕರಣಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಿದ್ದು ಕಾಮಗಾರಿ ಆರಂಭಿಸಲಾಗಿದೆ. ಇಂದು ಆರ್‌ಸಿಸಿ ಲೈನಿಂಗ್ ಕಾಮಗಾರಿ ಆರಂಭವಾಗಿದ್ದು, ಸಂತೋಷ ತಂದಿದೆ. ಕಾಮಗಾರಿ ನಿಗಮ ತಾಂತ್ರಿಕತೆಗೆ ತಕ್ಕಂತೆ ನಡೆಯಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಇನ್ನು ಎಲ್ಲಿ ಹಾರ್ಡ್‌ರಾಕ್ (ಗಟ್ಟಿಕಲ್ಲು) ಇದೆಯೋ ಅಲ್ಲಿ ನೇರವಾಗಿ ಆರ್‌ಸಿಸಿ ಲೈನಿಂಗ್ ಮಾಡಲಾಗುವುದು. ಪ್ರತಿಯೊಂದು ಕಿ.ಮೀಗೆ ಲೈನ್ ಎಸ್ಟಿಮೇಟ್ ಇದೆ. ಅದರಂತೆ ಕಾಮಗಾರಿ ನಿರ್ವಹಿಸಲಾಗುವುದು.
ಇನ್ನು ಇದಕ್ಕಾಗಿ ಸಂಚಾರಿ ಗುಣ ನಿಯಂತ್ರಣ ತಂಡ ರಚಿಸಿದ್ದು, ಇದು ನಿರಂತರ ಸ್ಯಾಂಪಲ್ ತೆಗೆದು ಸೈ ಎಂದ ಮೇಲೆ ಕೆಲಸ ಮುಂದುವರಿಯುವುದು. ಕಾಂಕ್ರೀಟ್ ಮಿಕ್ಷರ್‌ನ್ನು ತಂತ್ರಜ್ಞಾನ ಆಧಾರಿತವಾಗಿ ಮಾಡಲಾಗುತ್ತಿದೆ. ಅತ್ಯುನ್ನತ ತಾಂತ್ರಿಕತೆಯ ಪೂರ್ಣ ಪ್ರಯೋಜನ ಪಡೆಯಲಾಗುತ್ತಿದೆ ಎಂದು ಹೇಳಿದರು.
ಎಂಡಿ ಮೋಹನ ಅವರೊಂದಿಗೆ ಪ್ರಭಾರಿ ಮುಖ್ಯ ಅಭಿಯಂತರರ ಕ್ಷೇತ್ರಪಾಲ ಅಧೀಕ್ಷಕ ಅಭಿಯಂತರ ವಿ.ಕೆ ಪೋತದಾರ, ಕೃಷ್ಣಮೂರ್ತಿ, ಕಾರ್ಯಪಾಲಕ ಅಭಿಯಂತರರಾದ ಅರುಣಕುಮಾರ ಬಾರಿಕೇರಿ, ಎಸ್.ರಂಗರಾಂ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹಮದ ರೆಹಮಾನಸಾಬ್, ಗುಣ ನಿಯಂತ್ರಣ ಎಂಜಿನೀಯರ್ ತಂಬಿದೋರೈ ಇತರರು ಇದ್ದರು.