ಬಿಜೆಪಿಗೆ ಹಿಂದುತ್ವ, ಕಾಂಗ್ರೆಸ್‌ಗೆ ಜಾತ್ಯತೀತ ಮುಖವಾಡ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಏ.9
ಬಿಜೆಪಿ, ಹಿಂದುತ್ವ, ಕಾಂಗ್ರೆಸ್ ಜಾತ್ಯತೀತ ಮುಖವಾಡ ಹಾಕಿಕೊಂಡಿವೆ ಎಂದು ಸಿಪಿಐ ಆರೋಪಿಸಿದೆ.
ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬುಧವಾರ ಬಿಡುಗಡೆ ಮಾಡಿ ಮಾತನಾಡಿದ ಸಿಪಿಐನ ರಾಷ್ಟ್ರೀಯ ಮಂಡಳಿಯ ಸದಸ್ಯ ಡಾ.ಸಿದ್ದನಗೌಡ ಪಾಟೀಲ್, ಬಹುತೇಕ ಒಂದೇ ಗುಣಗಳನ್ನು ಹೊಂದಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ಈ ಬಾರಿಯ ಚುನಾವಣೆಯಲ್ಲಿ ಮತದಾರರು ದೂರವಿಡಬೇಕು ಎಂದು ಮನವಿ ಮಾಡಿದರು.
ಎರಡು ಅವಧಿಯಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ಹಲವಾರು ದೊಡ್ಡ ದೊಡ್ಡ ಹಗರಣಗಳಲ್ಲಿ ಸಿಲುಕಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾರ್ಪೋರೇಟ್ ಕಂಪನಿಗಳು ದೊಡ್ಡ ಮಟ್ಟದಲ್ಲಿ ಭೂಮಿಯನ್ನು ಖರೀದಿಸಿ ಕೊಂಡಿದ್ದವು. ಇದೀಗ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಉದ್ದೇಶದಿಂದ ಆ ಪಕ್ಷದ ಚುನಾವಣೆಗಾಗಿ ಕಂಪನಿಗಳು ಹಣ ಕೊಡುತ್ತಿವೆ ಎಂದು ಆರೋಪಿಸಿದರು.
ಆತಂಕ: ಕಾಂಗ್ರೆಸ್ ಹಾಗೂ ಬಿಜೆಪಿ ಚುನಾವಣಾ ಪ್ರಣಾಳಿಕೆಯ ಬಗ್ಗೆ ಟೀಕಿಸಿದ ಸಿದ್ದನಗೌಡ ಪಾಟೀಲ್, ಈ ಪಕ್ಷಗಳ ಪ್ರಣಾಳಿಕೆಗಳು ನೆಪ ಮಾತ್ರ. ಅವುಗಳು ಸಮರ್ಪಕವಾಗಿ ಜಾರಿಗೆ ತರುವ ಕೆಲಸ ಈವರೆಗೆ ಅವರಿಂದ ಸಾಧ್ಯವಾಗಿಲ್ಲ. ಅವರ ನೀತಿಗಳು ಭ್ರಷ್ಟಾಚಾರಕ್ಕೆ ಕಾರಣವಾಗಿವೆ. ಮುಂದಿನ ದಿನಗಳಲ್ಲಿ ಕೃಷಿ ವ್ಯವಸ್ಥೆಯಲ್ಲಿ ಕಾರ್ಪೋರೇಟ್ ಬಂದಿದ್ದೆಯಾದರೆ ರೈತರಿಗೆ ಉಳುಮೆ ಮಾಡಲು ಭೂಮಿ ಇಲ್ಲದಂತಾಗಲಿದೆ. ಮುಂದಿನ ದಿನಗಳಲ್ಲಿ ಕಾರ್ಪೋರೇಟ್ ಪ್ರತಿನಿಧಿಗಳು ಸಂಸತ್ ಪ್ರವೇಶ ಮಾಡಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಅಪಾಯಕಾರಿ: ಬಿಜೆಪಿ ನೈತಿಕವಾಗಿ ಅಸ್ತಿತ್ವ ಕಳೆದುಕೊಂಡಿದೆ. ಎಡಪಕ್ಷಗಳ ದೇಶದ 250 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಕರ್ನಾಟಕದಲ್ಲಿ 6 ಕಡೆಗಳಲ್ಲಿ ಮಿತ್ರ ಪಕ್ಷಗಳಾದ ಸಿಪಿಐ(ಎಂ) ನೊಂದಿಗೆ ಸ್ಪರ್ಧೆ ಮಾಡಿದೆ. ಕೇಂದ್ರದಲ್ಲಿ ಈ ಬಾರಿಯಲ್ಲಿ ಎನ್‌ಡಿಎ ಆಗಲಿ, ಯುಪಿಎ ಆಗಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಆದ್ದರಿಂದ ಎಡಪಕ್ಷಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಕೇಂದ್ರದಲ್ಲಿ ವಿಷಯಾಧಾರಿತ ಸರ್ಕಾರ ರಚನೆ ಆಗಬೇಕೆಂಬುದು ನಮ್ಮ ಇಚ್ಛೆ. ದೇಶದಲ್ಲಿ ಬಿಜೆಪಿಯ ಫ್ಯಾಷಿಸ್ಟ್ ಸ್ಥಿರ ಸರ್ಕಾರ ಅಪಾಯಕಾರಿ ಎಂದು ಹೇಳಿದರು.
ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ. ಲೋಕೇಶ್, ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ರೇಣುಕಾರಾಧ್ಯ, ರಾಜ್ಯ ಸಮಿತಿ ಸದಸ್ಯೆ ರಾಧಾ ಸುಂದರೇಶ್ ಉಪಸ್ಥಿತರಿದ್ದರು.