ರಾಮ ವಸಂತೋತ್ಸವ 15 ರವರೆಗೆ
ನರಸಿಂಹರಾಜಪುರ: ಅಗ್ರಹಾರದ ರಾಮಸೇವಾ ಸಮಿತಿ ಆಶ್ರಯದಲ್ಲಿ ರಾಮ ವಸಂತೋತ್ಸವ ಕಾರ್ಯಕ್ರಮವು ಉಮಾ ಮಹೇಶ್ವರ ಸಭಾ ಭವನದಲ್ಲಿ ಏಪ್ರಿಲ್ 15 ರ ವರೆಗೆ ನಡೆಯಲಿದೆ ಎಂದು ರಾಮಸೇವಾ ಸಮಿತಿ ತಿಳಿಸಿದೆ.
ಬುಧವಾರ ತ್ರಿಕಾಲ ಪೂಜೆ ಹಾಗೂ ಸಂಜೆ ಶ್ರೀರಾಮ ಜನನ, ಡೋಲೋತ್ಸವ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಬಿ.ಎಂ. ಮೇಘನ ಅವರಿಂದ ಗಮಕ ವಾಚನ ಮತ್ತು ಎ.ಎಸ್. ವತ್ಸಲ ಅವರಿಂದ ವ್ಯಾಖ್ಯಾನ ನಡೆಯಿತು.
ಗುರುವಾರ ಸೀತಾ ಜನನ, ಡೋಲೋತ್ಸವ ಹಾಗೂ ದಿಂದೋಡಿ ನಟೇಶ್ ಅವರಿಂದ ಹಾಡುಗಾರಿಕೆ ನಡೆಯಲಿದೆ. ಶುಕ್ರವಾರ ಸೀತಾ ಕಲ್ಯಾಣ ಹಾಗೂ ಮಧ್ಯಾಹ್ನ 3.30ಕ್ಕೆ ರಂಗೋಲಿ ಸ್ಪರ್ಧೆ ನಡೆಯಲಿದೆ. ಸಂಜೆ ಸೀತಾರಾಮ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದೆ.
ಶನಿವಾರ ಸಂಜೆ ಜಮ್ಮಲದಿನ್ನಿ ಗವಾಯಿ ಬಿ.ಎಂ. ಸುರೇಶ್ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಭಾನುವಾರ ಸಂಜೆ ಕೊಪ್ಪದ ನಾಗರತ್ನ ನಟರಾಜ್ ಅವರಿಂದ ಸುಗಮ ಸಂಗೀತ ನಡೆಯಲಿದೆ.
14ರಂದು ಪಟ್ಟಾಭಿಷೇಕ: ಏ.14ರ ಸೋಮವಾರ ಸೀತಾರಾಮ ಪಟ್ಟಾಭಿಷೇಕ ನಡೆಯಲಿದ್ದು, ಪಟ್ಟಾಭಿಷೇಕದ ಅಂಗವಾಗಿ ಬೆಳಗ್ಗೆ ರಾಜಬೀದಿಯಲ್ಲಿ ಉತ್ಸವ, ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ರಾತ್ರಿ ಸೀತೂರು ಯಕ್ಷಗಾನ ಕಲಾ ಮಂಡಳಿಯವರಿಂದ ಯಕ್ಷಗಾನ ನಡೆಯಲಿದೆ. ಮಂಗಳವಾರ ಹನುಮೋತ್ಸವ ನಡೆಯಲಿದೆ. ಸಂಜೆ ಬೆಂಗಳೂರಿನ ಸಿಂಧು, ಸುಧಾ ಸೋಮೇಶ್ ಹಾಗೂ ನಮ್ರತ ತಂಡದವರಿಂದ ಗೀತಾ ನೃತ್ಯ ನಡೆಯಲಿದೆ.
ಪ್ರತಿ ದಿನ ಸಂಜೆ ಅಗ್ರಹಾರದ ಲಲಿತ ಭಜನಾ ಮಂಡಳಿಯವರಿದ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತಿ ನಿತ್ಯ ಬೆಳಗ್ಗೆ 8.30 ಗಂಟೆಗೆ ಬೆಳಗಿನ ಪೂಜೆ, ಮಧ್ಯಾಹ್ನ 11.30 ಹಾಗೂ ಸಂಜೆ 7 ಗಂಟೆಗೆ ಸಂಧ್ಯಾ ಪೂಜೆ ನಡೆಯಲಿದೆ. ವಿ.ಎಸ್. ಕೃಷ್ಣಭಟ್ ಅವರಿಂದ ಪ್ರತಿ ದಿನ ಮಧ್ಯಾತ್ಮ ಪಾರಾಯಣ ನಡೆಯಲಿದೆ.