ರಾಷ್ಟ್ರ ರಕ್ಷಣೆಗೆ ಬಿಜೆಪಿ ಬೆಂಬಲಿಸಿ
ತರೀಕೆರೆ: ರಾಷ್ಟ್ರ ರಕ್ಷಣೆಗಾಗಿ ಬಿಜೆಪಿಗೆ ಮತ ಹಾಕಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ತಿಳಿಸಿದ್ದಾರೆ.
ಉಡುಪಿ-ಚಿಕಮಗಳೂರು ಲೋಕಸಭಾ ಚುನಾವಣಾ ಅಭ್ಯರ್ಥಿ ಪರ ಗುರುವಾರ ಪಟ್ಟಣದ ಮಾಚೇನಹಳ್ಳಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಭಯೋತ್ಪಾದನೆ ಎನ್ನುವುದು ಇಂದು ದೂರದ ಕಾಶ್ಮೀರದ ಅಥವಾ ಅಸ್ಸಾಂನ ವಿಷಯವಾಗಿ ಉಳಿದಿಲ್ಲ. ಅದು ನಮ್ಮ ಜಿಲ್ಗೆಗೆ ನಮ್ಮ ಹತ್ತಿರವೇ ಬಂದಿದೆ. ಭಯೋತ್ಪಾದಕರು ಮತ್ತು ನಕ್ಸಲ್‌ರಲ್ಲಿ ಹೊಂದಾಣಿಕೆ ಇದೆ, ಯಾವುದೂ ಸುರಕ್ಷಿತವಾಗಿ ಉಳಿದಿಲ್ಲ, ಭಯೋತ್ಪಾದಕರ ಸಂಕಷ್ಟಕ್ಕೆ ದೇಶ ಒಳಗಾಗಿದೆ, ಬ್ರಹ್ಮಾಂಡ ಭ್ರಷ್ಟಾಚಾರ ನೋಡಿಯೂ ಕಾಂಗ್ರೆಸ್‌ಗೆ ಮತ ಹಾಕಲು ಹೋಗಬೇಡಿ, ವಾಜಪೇಯಿ ಅವರ ಸರ್ಕಾರದಲ್ಲಿ ಎಲ್ಲ ಪದಾರ್ಥಗಳ ಬೆಲೆ ಕಡಿಮೆ ಇತ್ತು, ಇದೀಗ ಕಬ್ಬಿಣ, ಗೊಬ್ಬರ, ಸಿಲೆಂಡರ್, ಬಂಗಾರ ಹೀಗೆ ಎಲ್ಲದರ ಬೆಲೆಯೂ ದುಪ್ಪಟ್ಟು ಏರಿದೆ ಎಂದು ಅವರು ತಿಳಿಸಿದರು.
ಅಭಿವೃದ್ಧಿ ಪರ್ವ: ವಾಜಪೇಯಿ ಅವರ ಸರ್ಕಾರದಲ್ಲಿ ಗ್ರಾಮ ಸಡಕ್ ಯೋಜನೆ ಪ್ರಾರಂಭಿಸಲಾಯಿತು. 28 ಸಾವಿರ ಕಿ.ಮೀ. ಚತುಷ್ಪದ ರಸ್ತೆ ನಿರ್ಮಾಣ, ಟೆಲಿಫೋನ್ ಕ್ರಾಂತಿಯೇ ಆಗಿದೆ, ದೇಶದಲ್ಲಿ 86 ಕೋಟಿ ಜನಗಳು ಇದೀಗ ಮೊಬೈಲ್ ಬಳಕೆ ಮಾಡುತ್ತಿದ್ದಾರೆ ಇದೆಲ್ಲವೂ ಆಗಿದ್ದು ವಾಜಪೇಯಿ ಸರ್ಕಾರದಿಂದ. ಬಿಜೆಪಿ ಎಂದರೆ ಅಭಿವೃದ್ಧಿ ಪರ್ವ, ನಾವು ಜಗಳ ಮಾಡಿ ಅಧಿಕಾರ ಕಳೆದುಕೊಂಡವೇ ಹೊರತು ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂದಲ್ಲ ಎಂದ ಅವರು, ಅಭಿವೃದ್ಧಿ ಮತ್ತು ರಕ್ಷಣೆ ನಿರ್ಧರಿಸುವ ಚುನಾವಣೆ ಇದು. ನರೇಂದ್ರ ಮೋದಿ ಯೋಗ್ಯ ನಾಯಕತ್ವ ಹೊಂದಿದ್ದಾರೆ ಎಂದು ಅವರು ತಿಳಿಸಿದರು.
ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ಮಾತನಾಡಿದರು. ಎಚ್.ಎಂ. ಗೋಪಿಕೃಷ್ಣ, ಪುರಸಭೆ ಮಾಜಿ ಸದಸ್ಯ ಕೃಷ್ಣಮೂರ್ತಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆರ್.ದೇವಾನಂದ್, ಪಕ್ಷದ ತಾಲೂಕು ಅಧ್ಯಕ್ಷ ಕರಕುಚ್ಚಿ ಮೋಹನಕುಮಾರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಲ್. ರಮೇಶ್, ಟಿ.ಎಂ. ಭೋಜರಾಜ್, ಅರವಿಂದ್ ಇತರರು ಇದ್ದರು.