ದೇಶಕ್ಕೆ ಮೋದಿಯಿಂದ ಸಮರ್ಥ ಆಡಳಿತ: ಬಿಎಸ್‌ವೈ
ಕ.ಪ್ರ.ವಾರ್ತೆ ್ಣ ತರೀಕೆರೆ ್ಣ ಏ. 11
ದೇಶಕ್ಕೆ ಸಮರ್ಥ ಆಡಳಿತ ನೀಡಬಲ್ಲ ಪ್ರಧಾನ ಮಂತ್ರಿಯ ಅವಶ್ಯಕತೆ ಇದ್ದು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ದಕ್ಷ ಅಡಳಿತ ನಡೆಸಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬಲ್ಲರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಸಮೀಪದ ಅಜ್ಜಂಪುರ ಕೈಲಾಸಂ ಬಯಲು ರಂಗ ಮಂದಿರದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ಯಾರು ಎಂದು ನಿರ್ಧಾರ ಮಾಡುವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ. ಕಾಂಗ್ರೆಸ್ ಪಕ್ಷ ದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಪಡೆದದ್ದು ಕೇವಲ ಎಂಟು ಸೀಟು ಮಾತ್ರ. ಇನ್ನು ಮೂರನೇ ರಂಗ ಉದಯವಯೇ ಆಗಿಲ್ಲ ಎಂದರು.
ರಾಜ್ಯದಲ್ಲಿ ಸುವರ್ಣ ಗ್ರಾಮ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ ಇತ್ಯಾದಿ ಅನೇಕ ಯೋಜನೆಗಳ ಸೌಲಭ್ಯಗಳನ್ನು ಬಿಜೆಪಿ ಸರ್ಕಾರ ನೀಡಿತ್ತು. ಗುಜರಾತ್ ರಾಜ್ಯ ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗಿದೆ. ಅದೇ ರೀತಿ ದೇಶದ ಎಲ್ಲ ಕಡೆ ಅಭಿವೃದ್ಧಿಯಾಗಬೇಕು ಎನ್ನುವುದು ಪಕ್ಷದ ಆಶಯ. ಸ್ವೀಸ್ ಬ್ಯಾಂಕ್‌ನಲ್ಲಿರುವ ಹಣವನ್ನು ದೇಶಕ್ಕೆ ತರಿಸುವ ಶಕ್ತಿ ನರೇಂದ್ರ ಮೋದಿಯವರಿಗಿದೆ. ವಾಜಪೇಯಿ ಸರ್ಕಾರದಿಂದ ಗ್ರಾಮ ಸಡಕ್ ಯೋಜನೆ, ದೇಶಾದ್ಯಂತ ಚತುಷ್ಪಥ ರಸ್ತೆ ನಿರ್ಮಾಣವಾಗಿರುವುದು ಬಿಜೆಪಿ ಕೊಡುಗೆ ಎಂದರು.
ಕಾರ್ಯಗತವಾಗಿಲ್ಲ: ಮಾಜಿ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ಅಜ್ಜಂಪುರ ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ 13 ಕೋಟಿ ಯೋಜನೆಯನ್ನು ಈ ಸರ್ಕಾರ ಇನ್ನೂ ಕಾರ್ಯಗತ ಮಾಡಿಲ್ಲ ಎಂದು ಅರೋಪಿಸಿದರು.
ಸಮಾಜ ಸೇವಕ ಗೋಪಿಕೃಷ್ಣ ಅವರು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರೇಖಾ ಹುಲಿಯಪ್ಪ ಗೌಡ, ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ, ಡಾ. ಮರುಳಸಿದ್ದಪ್ಪ, ಜಿಪಂ ಸದಸ್ಯರಾದ ಕೃಷ್ಣಮೂರ್ತಿ, ಎಸ್.ಬಿ. ಆನಂದಪ್ಪ, ಕೆ.ಆರ್. ಆನಂದಪ್ಪ, ಪಕ್ಷದ ಕಾರ್ಯಕರ್ತರು ಮತ್ತಿತರರು ಭಾಗವಹಿಸಿದ್ದರು.