ನಾಳೆ ಮೋದಿ ಅಲೆ ದರ್ಶನ: ಸಿ.ಟಿ. ರವಿ
ಕ.ಪ್ರ.ವಾರ್ತೆ ್ಣ ಚಿಕ್ಕಮಗಳೂರು ್ಣ ಏ. 11
ಚಿಕ್ಕಮಗಳೂರಲ್ಲಿ ಭಾನುವಾರ ಮೋದಿ ಅಲೆಯ ದರ್ಶನ ಮಾಡಿಸುತ್ತೇವೆ ಎಂದು ಶಾಸಕ ಸಿ.ಟಿ. ರವಿ ಅವರು ಎಲ್ಲಿದೆ ಮೋದಿ ಅಲೆ ಕೈಗೆ ಸಿಗುತ್ತಿಲ್ಲ ಎಂದಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ತಿರುಗೇಟು ನೀಡಿದ್ದಾರೆ.
ಪ್ರತಿ ಊರು, ಮನೆ- ಮನೆಗಳಲ್ಲಿ ಮೋದಿ ಅಲೆ ಇದೆ. ಜಾತಿ, ಪಕ್ಷ ಮೀರಿರುವ ಚುನಾವಣೆ ಇದಾಗಲಿದೆ. ಯಾರಿಗೆ ರಾಷ್ಟ್ರ ಮುಖ್ಯ, ಪಕ್ಷ, ಸಿದ್ಧಾಂತ, ದೇಶಕ್ಕೆ ಒಳ್ಳೆಯದಾಗಬೇಕೆಂಬ ಮನಸ್ಸಿದೆಯೋ ಅವರೆಲ್ಲರೂ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಭಾನುವಾರ ಮಧ್ಯಾಹ್ನ 12 ಗಂಟೆಗೆ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಬಿಜೆಪಿಯ ಭಾರತ ಗೆಲ್ಲಿಸಿ ಚುನಾವಣಾ ರ್ಯಾಲಿ ನಡೆಯಲಿದ್ದು, ಇದರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಪ್ರಚಾರ ಸಭೆಯಲ್ಲಿ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಹಾಸನ ಕ್ಷೇತ್ರದ ಅಭ್ಯರ್ಥಿ ವಿಜಯಶಂಕರ್, ಬಿಜೆಪಿ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಏ. 13ರಂದು ನಡೆಯಲಿರುವ ಬಿಜೆಪಿಯ ರ್ಯಾಲಿ ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ರಾಜಕೀಯ ರ್ಯಾಲಿಗಳ ದಾಖಲೆ ಅಳಿಸಿಹಾಕಿ ಹೊಸ ಇತಿಹಾಸ ಬರೆಯಲಿದೆ ಎಂದ ಸಿ.ಟಿ. ರವಿ, ಮೋದಿಯವರನ್ನು ನೋಡಬೇಕು, ಅವರ ಭಾಷಣ ಕೇಳಬೇಕೆಂದು ಬಹಳಷ್ಟು ಜನ ಅಪೇಕ್ಷೆಪಟ್ಟಿದ್ದಾರೆ. ದೇಶದಲ್ಲಿ ಮೋದಿ ಪ್ರಧಾನಿ ಆಗಬೇಕೆಂಬ ವಾತಾವರಣ ನಿರ್ಮಾಣಗೊಂಡಿದೆ ಎಂದರು.