ಕುಡುಕ ತಂದೆಯ ಕಾಟ ತಾಳಲಾರದೆ ಮಗ ಆತ್ಮಹತ್ಯೆ
ನರಸಿಂಹರಾಜಪುರ: ಅಳೇಹಳ್ಳಿಯ ಅಶ್ವತ್ಥ್ ( 24) ಎಂಬವನು ತನ್ನ ಮನೆಯ ಮುಂದಿನ ತೆಂಗಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ. ಅಳೇಹಳ್ಳಿಯ ಅಶ್ವತ್ಥ್ನ ತಂದೆ ರಮೇಶ್ ಪ್ರತಿದಿನ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ಪತ್ನಿ ದಾನಮ್ಮ ಅವರಿಗೆ ಹೊಡೆಯುತ್ತಿದ್ದರು. ಶನಿವಾರ ರಾತ್ರಿ 8 ಗಂಟೆಯ ಸಮಯದಲ್ಲಿ ರಮೇಶ್ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡಿದ್ದಾರೆ. 9 ಗಂಟೆಯ ಹೊತ್ತಿಗೆ ಮಗ ಅಶ್ವತ್ಥ್ನನ್ನು ಮನೆಯಿಂದ ಹೊರಗೆ ದಬ್ಬಿದರು ಎನ್ನಲಾಗಿದೆ. ಇದರಿಂದ ಬೇಸತ್ತ ಅಶ್ವತ್ಥ್ ಮನೆಯ ಮುಂದಿನ ತೆಂಗಿನ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ. ಮನೆಯವರು ಬೆಳಿಗ್ಗೆ 6 ಗಂಟೆಗೆ ಬಾಗಿಲು ತೆಗೆದಾಗ ಅಶ್ವತ್ಥ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಮೇಶ್ ಪತ್ನಿ ದಾನಮ್ಮ ಪೊಲೀಸರಿಗೆ ದೂರು ನೀಡಿ, ತನ್ನ ಪತಿ ದಿನವೂ ಕುಡಿದು ಬಂದು ಗಲಾಟೆ ಮಾಡಿದ್ದರಿಂದಲೇ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರಮೇಶನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.