ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಜನಪದ ಚಟುವಟಿಕೆಗೆ ಪ್ರೋತ್ಸಾಹ ಅಗತ್ಯ'

Lingaraj Badiger
Updated On : 14 Apr 2014, 10:13 am

ಚಿಕ್ಕಮಗಳೂರು: ಜಾನಪದ ನಮ್ಮ ಮೂಲ ಸಂಸ್ಕೃತಿ. ಅದು ಸರ್ವ ವ್ಯಾಪಿಯೂ ಹೌದು ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ನಿವೃತ್ತ ಜಿಲ್ಲಾಧಿಕಾರಿ ಟಿ. ತಿಮ್ಮೇಗೌಡ ಹೇಳಿದ್ದಾರೆ.
 ಜಾನಪದ ಪರಿಷತ್ತು ಹಾಗೂ ಜಾನಪದ ಲೋಕದ ಸಂಸ್ಥಾಪಕ ನಾಡೋಜ ಎಚ್.ಎಲ್. ನಾಗೇಗೌಡರ ಜನ್ಮ ಶತಮನೋತ್ಸವದ ಅಂಗವಾಗಿ ಜಿಲ್ಲಾ ಘಟಕ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಗ್ರಹ, ಸಂರಕ್ಷಣೆ ಅಗತ್ಯ: ಸಾಂಪ್ರದಾಯಕ ಜಾನಪದ ಪರಂಪರೆ ಜಿಲ್ಲೆಯಲ್ಲಿ ಮುಂದುವರೆಯಲು ಈ ಹಿಂದೆ ಜಿಲ್ಲಾಧಿಕಾರಿಯಾಗಿ ಇಲ್ಲಿ ಕಾರ್ಯನಿರ್ವಹಿಸಿದ್ದ ನಾಗೇಗೌಡರ ಜನ್ಮ ಶತಮನೋತ್ಸವ ಅರ್ಥಪೂರ್ಣ ಆಚರಣೆ ಸಹಕಾರಿಯಾಗಬೇಕು. ಜಾನಪದ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳು. ಕಲೆ, ಸಾಹಿತ್ಯಕ್ಕೆ ಜನಪದ ಸೀಮಿತವಲ್ಲ. ಆಹಾರ, ಕ್ರೀಡೆ, ಹಬ್ಬ, ಔಷಧಿ, ಆಚರಣೆ ಸೇರಿದಂತೆ ದಿನನಿತ್ಯದ ಚಟುವಟಿಕೆಯಲ್ಲಿ ವ್ಯಾಪಿಸಿದೆ. ಇದರ ಸಂಗ್ರಹ, ಸಂರಕ್ಷಣೆ, ಸಂವರ್ದನೆ ಅಗತ್ಯ ಎಂದರು.
 ನಿವೃತ್ತ ಅಧಿಕಾರಿ ಕೆ.ವಿ. ರವೀಂದ್ರನಾಥ ಠ್ಯಾಗೂರ್ ಸಭೆ ಉದ್ಘಾಟಿಸಿ ಮಾತನಾಡಿ, ಬದುಕುವ ಶಕ್ತಿಯನ್ನು ಜಾನಪದ ಕೊಡುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಪ್ರಬುದ್ಧರಾಗಿಸುತ್ತದೆ. ದೇಹದ ಪ್ರತಿ ಕಣವೂ ಜಾನಪದಕ್ಕೆ ಸ್ಪಂದಿಸುತ್ತದೆ.  ಇಲ್ಲಿ ಶಬ್ದ ಉಚ್ಚಾರ, ಅರ್ಥ, ಏರಿಳಿತ ವಿಶೇಷ ಜ್ಞಾನವನ್ನೂ ಕೊಡುತ್ತದೆ. ಹೃದಯ ಶ್ರೀಮಂತಿಕೆಗೆ ಮೂಲಭೂತವಾಗಿ ಜಾನಪದ ಸಂಪತ್ತು ಸಹಕಾರಿ ಎಂದರು.
 ಆಶಾಕಿರಣದ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಮತ್ತು ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಐ.ಎಂ. ಮಹೇಶಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಎಸ್. ಶಿವಸ್ವಾಮಿ ಮಾತನಾಡಿದರು.
 ಎಐಟಿ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ರಾಯ, ವಕೀಲ ಧ್ರುವನಾರಾಯಣ, ದಲಿತ ಮುಖಂಡ ರಾಧಾಕೃಷ್ಣ, ಸಾಹಿತಿ ಲಕ್ಷ್ಮಣಗೌಡ, ಹಳಸೆ ಶಿವಣ್ಣ ಉಪಸ್ಥಿತರಿದ್ದರು. ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಎಸ್.ಎಸ್. ವೆಂಕಟೇಶ್ ಸ್ವಾಗತಿಸಿ,  ನುಡಿಸಿರಿ ಅಧ್ಯಕ್ಷ ಸ. ಗಿರಿಜಾಶಂಕರ್ ಪ್ರಸ್ತಾವಿಸಿ, ವಾಣಿ ಚಂದ್ರಯ್ಯನಾಯ್ಡು ವಂದಿಸಿದರು. ಸುಭಾಶ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement