ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪ್ರಗತಿ ಅಂದ್ರೆ ಇದೇನಾ ಸ್ವಾಮಿ?

Lingaraj Badiger
Updated On : 14 Apr 2014, 10:13 am

ಚಿಕ್ಕಮಗಳೂರು: ಪಶ್ಚಿಮಘಟ್ಟಗಳ ಪರ್ವತ ಶ್ರೇಣಿಯಲ್ಲಿರುವ, ತುಂಗಾ, ಭದ್ರಾ, ನೇತ್ರಾವತಿ, ಹೇಮಾವತಿ, ವೇದಾವತಿ ಜೀವ ನದಿಗಳ ಮೂಲ ಸ್ಥಾನವಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಒಂದು ದಶಕಗಳಿಂದ ಬಗೆಹರಿಯದ ಜಟಿಲ ಸಮಸ್ಯೆಗಳು ಇಲ್ಲಿನ ಜನರ ಬದುಕಿನ ಮೇಲೆ ಗಂಭೀರವಾಗಿ ದುಷ್ಪರಿಣಾಮ ಬೀರಿವೆ.
ಒಂದು ದಶಕ ಕಳೆಯಿತು. ಕೇಂದ್ರದಲ್ಲಿ ಎರಡು ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರಗಳು ಬಂದು ಹೋಗಿವೆ. ಚುನಾವಣೆ ಬಂದಾಗ, ರಾಜಕೀಯ ಪಕ್ಷಗಳು ಭರವಸೆಗಳ ಸರಮಾಲೆಯನ್ನು ಜನರ ಕೊರಳಿಗೆ ಸುತ್ತುತ್ತವೆ. ಚುನಾವಣೆ ನಡೆದು ಫಲಿತಾಂಶ ಹೊರ ಬರುತ್ತಿದ್ದಂತೆ ಜನಪ್ರತಿನಿಧಿಗಳು ಜನರನ್ನು ಮರೆತು ಬಿಡುತ್ತಾರೆ ಎಂಬ ಸತ್ಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಟ್ಟ, ಗುಡ್ಡಗಳಂತೆ ಶಾಶ್ವತವಾಗಿ ನೆಲೆವೂರಿದೆ.
ಚುನಾವಣೆ ಬಂದಾಗ ಆರೋಪ, ಪ್ರತ್ಯಾರೋಪಗಳು, ರಾತ್ರಿ ಹೊತ್ತಿನಲ್ಲಿ ಸೂರ್ಯ ತೋರಿಸುವಂತಹ ಸುಳ್ಳು ಭರವಸೆ ಕೇಳಿ ಕೇಳಿ ಜಿಲ್ಲೆಯ ಜನರು ಬೇಸತ್ತು ಹೋಗಿದ್ದಾರೆ. ಕಳೆದ ಒಂದು ದಶಕದಲ್ಲಿ ಗಂಭೀರವಾದ ಸಮಸ್ಯೆಗಳಿಗೆ ಇತಿಶ್ರೀ ಹೇಳುವ ಕೆಲಸ ಯಾವುದೇ ರಾಜಕೀಯ ಪಕ್ಷದಿಂದ ಆಗಿಲ್ಲ. ಎಂಬುದು ಮಲೆನಾಡಿನ ಕೆಲವು ಗ್ರಾಮಾಂತರ ಪ್ರದೇಶಗಳ ಜನರು ಈ ಬಾರಿ ಮತದಾನ ಬಹಿಷ್ಕಾರಕ್ಕೆ ಕರೆ ನೀಡಿರುವುದೇ ಸಾಕ್ಷಿ.
ನಕ್ಸಲ್ ಸಮಸ್ಯೆ: ಮಲೆನಾಡಿನ ಜನರ ಭವಿಷ್ಯಕ್ಕೆ ಮುಳ್ಳಾಗಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದ ವರ್ಷದಿಂದ ಹಲವು ಸಮಸ್ಯೆಗಳು ಹುಟ್ಟಿಕೊಂಡವು. ಸೂಕ್ತ ಸಮಯದಲ್ಲಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳದೆ ಹೋಗಿದ್ದರ ಪರಿಣಾಮ ನಕ್ಸಲ್ ಸಂಘಟನೆ ಹುಟ್ಟಿಕೊಂಡಿತು.
ಮಲೆನಾಡಿನ ಕೆಲವು ಯುವಕ, ಯುವತಿಯರು, ಸರ್ಕಾರದ ಧೋರಣೆಯ ವಿರುದ್ಧ ಬಂದೂಕು ಹಿಡಿದು ಕಾನನದ ನಡುವೆ ಸಂಚರಿಸಲು ಆರಂಭಿಸಿದರು. ಅಲ್ಲಿನ ಜನರ ಅನುಕಂಪ ಸಂಪಾದಿಸಿ ನಕ್ಸಲ್ ಸಂಘಟನೆ ಹುಟ್ಟು ಹಾಕಿದರು. ಆಡಳಿತದಲ್ಲಿರುವ ಸರ್ಕಾರಗಳ ಕ್ರಮದ ವಿರುದ್ಧ ಬಂದೂಕಿನಲ್ಲಿ ಉತ್ತರ ನೀಡುತ್ತಾ ಬಂದರು.
ವಿಶೇಷ ಪ್ಯಾಕೇಜ್: ಇಲ್ಲಿರುವ ಜನರಿಗೆ ಮೂಲ ಸವಲತ್ತು ನೀಡಿದರೆ, ಈ ಸಮಸ್ಯೆ ಬಗೆಹರಿಸಬಹುದೆಂಬ ಉದ್ದೇಶದಿಂದ ಸರ್ಕಾರ ನಕ್ಸಲ್‌ಪೀಡಿತ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡಿತು. ಆದರೆ, ವೆಚ್ಚವಾಗುತ್ತಿದ್ದ ಹಣಕ್ಕೆ ತಕ್ಕಂತೆ ಕಾಮಗಾರಿ ನಡೆಯಲಿಲ್ಲ. ಆದರೂ, ಅಲ್ಲಿನ ಜನರು ಸರ್ಕಾರ ಮೇಲಿನ ವಿಶ್ವಾಸ ಕಳೆದುಕೊಳ್ಳಲಿಲ್ಲ. ಇಂದಿಗೂ ಮಲೆನಾಡಿನಲ್ಲಿ ನಕ್ಸಲರು ಬೀಡು ಬಿಟ್ಟಿದ್ದಾರೆ.
   ಹಳದಿ ಎಲೆ ರೋಗಪೀಡಿತ ಅಡಕೆ ತೋಟಗಳ ಮಾಲೀಕರಿಗೆ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಗೋರಕ್ ಸಿಂಗ್ ಸಮಿತಿ ರಚನೆ ಮಾಡಿತ್ತು. ಈ ಸಮಿತಿಯವರು ಮಲೆನಾಡಿನ ಕೆಲವೆಡೆ ಸಂಚರಿಸಿ ವಾಸ್ತವಿಕ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಕೇಂದ್ರ ಸರ್ಕಾರಕ್ಕೆ ಪರಿಹಾರಕ್ಕಾಗಿ ಕೆಲವು ಶಿಫಾರಸು ಮಾಡಿತ್ತು.
ಆರ್ಥಿಕ ಸಂಕಷ್ಟ: ರೋಗಪೀಡಿತ ಅಡಕೆ ತೋಟಗಳ ಪುನಶ್ಚೇತನಕ್ಕೆ ಆರ್ಥಿಕ ಸಹಾಯ ನೀಡಲಾಯಿತು. ಆದರೆ, ರೈತರ ಸಾಲಮನ್ನಾ ಮಾಡುವ ಕೆಲಸ ಈವರೆಗೆ ಆಗಿಲ್ಲ. ಆದ್ದರಿಂದ ಬೆಳೆಗಾರರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಯುಪಿಎ ಸರ್ಕಾರ ಅಧಿಕಾರದ್ದಲ್ಲಿದ್ದಾಗ ಜಾರಿಗೆ ಬಂದ ಸಾಲ ಮರು ಹೊಂದಾಣಿಕೆಯಿಂದ ಅನುಕೂಲವಾಗಲಿಲ್ಲ.
ರೈತರ ಆತ್ಮಹತ್ಯೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ವಿದರ್ಭ ಪ್ಯಾಕೇಜ್ ಜಾರಿಗೆ ತಂದಿತ್ತು. ಸಾಲ ಮರು ಹೊಂದಾಣಿಕೆಯ ಸವಲತ್ತು ಪಡೆದ ಬೆಳೆಗಾರರನ್ನು ಈ ಪ್ಯಾಕೇಜ್‌ನಿಂದ ಹೊರಗಿಡಲಾಯಿತು. ಇದರಿಂದಾಗಿ ಶೇ. 70 ರಷ್ಟು ಕಾಫಿ ಬೆಳೆಗಾರರು ವಂಚಿತರಾದರು.
ಕುದುರೆಮುಖ ಕಂಪನಿ: ಜಿಲ್ಲೆಯಲ್ಲಿ ಇದ್ದ ಏಕೈಕ ದೊಡ್ಡ ಕಂಪನಿ ಕುದುರೆಮುಖ ಅದಿರು ಕಂಪನಿ 2005ರ ಡಿಸೆಂಬರ್ 31 ರಂದು ಗಣಿಗಾರಿಕೆ ಮಾಡುವುದನ್ನು ನಿಲ್ಲಿಸಿತು.
ಅದಕ್ಕೆ ಪುನರ್ಜೀವ ನೀಡಲು ಕಂಪನಿಯವರು ಕಳೆದ ಐದಾರೂ ವರ್ಷಗಳಲ್ಲಿ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಕೇಂದ್ರ ಸರ್ಕಾರಿ ಸ್ವಾಮ್ಯದ ಈ ಕಂಪನಿ ಉಳಿಸಬೇಕು. ಇದರಿಂದ ಸಾವಿರಾರು ಜೀವನಕ್ಕೆ ಅನುಕೂಲವಾಗಲಿದೆ ಎಂದು ಒಂದರ ಮೇಲೊಂದರಂತೆ ಮನವಿ ಮಾಡುತ್ತಲೇ ಬರಲಾಯಿತು.
ಇವರ ಮನವಿಗೆ ಯಾವುದೇ ಸರ್ಕಾರ ಕಿವಿಗೊಡಲಿಲ್ಲ. ಇಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡದೆ ಹೋದರೂ ಕಂಪನಿಯರು ಕೇಳಿದ್ದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಗಣಿಗಾರಿಕೆ ಮಾಡಲು ಅವಕಾಶ ನೀಡಿದ್ದರೆ ಕುದುರೆಮುಖದಲ್ಲಿದ್ದ ಅದಿರು ಉತ್ಪಾದನಾ ಘಟಕ ಮುಂದುವರಿಸಬಹುದಾಗಿತ್ತು. ಸರ್ಕಾರಗಳು ಸ್ಪಂದಿಸದೆ ಹೋಗಿದ್ದರಿಂದ ಸಂಸ್ಥೆಯವರು ಪ್ರಯತ್ನದಿಂದ ಹಿಂದೆ ಸರಿದರು. ಕೊನೆಯಲ್ಲಿ ಉತ್ಪಾದನಾ ಘಟಕದಲ್ಲಿದ್ದ ಯಂತ್ರಗಳನ್ನು ಮಾರಾಟ ಮಾಡಿ ಸಂಸ್ಥೆಯವರು ಕೈತೊಳೆದುಕೊಂಡರು.
ನೀರಾವರಿ ಯೋಜನೆಗಳು: ಪಂಚ ಜೀವನದಿಗಳ ಉಗಮ ಸ್ಥಾನ ಚಿಕ್ಕಮಗಳೂರು ಜಿಲ್ಲೆ. ರಾಜ್ಯದ ಹಲವು ಜಿಲ್ಲೆಗಳಿಗೆ ಕುಡಿಯಲು ಹಾಗೂ ಕೃಷಿಗೆ ನೀರು ಕೊಡಲಾಗುತ್ತಿದೆ. ಆದರೆ, ಈ ನೀರನ್ನು ನಮ್ಮ ಜಿಲ್ಲೆಯವರು ಬಳಕೆ ಮಾಡಿಕೊಳ್ಳಲು ಯಾವುದೇ ಹೊಸ ಯೋಜನೆಗಳು ಜಾರಿಗೆ ಬಂದಿಲ್ಲ. ಕೆಲವು ಯೋಜನೆಗಳು ಜಾರಿಗೆ ಬಂದಿದ್ದರೂ ಕಾಮಗಾರಿಗಳ ಪ್ರಗತಿ ಆಮೆಗತಿಯಲ್ಲಿದ್ದರಿಂದ ಜನರಿಗೆ ನೀರಿನ ಭಾಗ್ಯ ಇಲ್ಲದಂತಾಗಿದೆ.
ಗಿರಿಜನರ ಹಕ್ಕು ಕಾಯ್ದೆ: ಅರಣ್ಯದ ಮೂಲ ನಿವಾಸಿಗರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಆದಿವಾಸಿಗಳ ಗಿರಿಜನರ ಹಕ್ಕು ಕಾಯ್ದೆ ಜಾರಿಗೆ ತಂದಿದೆ. ಆದರೆ, ಜಿಲ್ಲೆಯಲ್ಲಿ ಅದು ಸಮರ್ಪಕವಾಗಿ ಜಾರಿಯಾಗಿಲ್ಲ. ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಹಾಗೂ ವಲಸೆ ತಡೆಯುವ ಉದ್ದೇಶದಿಂದ ಯಾವುದೇ ಹೊಸ ಕೈಗಾರಿಕೆ ಸ್ಥಾಪನೆ ಮಾಡಲುವ ಕೆಲಸ ಆಗಿಲ್ಲ. ಇಷ್ಟೆಲ್ಲಾ ಸಮಸ್ಯೆಯಲ್ಲಿ ತೊರಳಾಡುತ್ತಿರುವ ಜಿಲ್ಲೆಯ ಜನರ ಎದುರು ಹೊಸದಾಗಿ ಕಸ್ತೂರಿ ರಂಗನ್ ವರದಿ, ಟೈಗರ್ ಪ್ರಾಜೆಕ್ಟ್, ವಿಶ್ವಪಾರಂಪರಿಕ ತಾಣ ಘೋಷಣೆಗಳು ಮರಣ ಶಾಸನವನ್ನಾಗಿ ಪರಿಣಮಿಸಿವೆ.

ಅಡಕೆ ಸಮಸ್ಯೆ
ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುವವರ ಸಂಖ್ಯೆ ಅಧಿಕವಾಗಿದೆ. ಅದರಲ್ಲೂ ಜಿಲ್ಲೆಯ ಎಲ್ಲಾ 7 ತಾಲೂಕುಗಳಲ್ಲಿ ಅಡಕೆ ಬೆಳೆಯುವವರು ಇದ್ದಾರೆ.
ಕಳೆದ ಐದು ದಶಕಗಳ ಹಿಂದೆ ಕಾಣಿಸಿಕೊಂಡ ಅಡಕೆಗೆ ಹಳದಿ ಎಲೆ ರೋಗ, ಇಂದು ಸುಮಾರು 8 ಸಾವಿರ ಹೆಕ್ಟೇರ್ ಅಡಕೆ ತೋಟಗಳಲ್ಲಿ ವಿಸ್ತರಿಸಿದೆ. ಈ ರೋಗ ಬಾಧೆಯ ವ್ಯಾಪ್ತಿ ದಿನ ದಿನಕ್ಕೂ ವಿಸ್ತರಣೆಯಾಗುತ್ತಿದೆ.
ಇದರಿಂದ ಬೆಳೆಗಾರರನ್ನು ರಕ್ಷಿಸುವ ಕೆಲಸ ಕೇಂದ್ರ ಸರ್ಕಾರದಿಂದ ಈವರೆಗೆ ಆಗಿಲ್ಲ. ಕೆಲವು ಅಡಕೆ ಬೆಳೆಗಾರರು ಹೇಗಿದ್ದರೋ ಹಾಗೆಯೇ ತೋಟ, ಮನೆ ಬಿಟ್ಟು ಬೇರೆಡೆಗೆ ವಲಸೆ ಹೋಗಿದ್ದಾರೆ.

ಕಾಫಿ ಸಮಸ್ಯೆ
ಜಿಲ್ಲೆಯ ಕಾಫಿ ಬೆಳೆ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಲೇ ಬರುತ್ತಿದೆ. ಒಮ್ಮೆ ಅತಿಯಾದ ಮಳೆಯಿಂದ ಹಾನಿ ಸಂಭವಿಸಿದ್ದರೆ, ಮತ್ತೊಂದು ವರ್ಷದಲ್ಲಿ ಮಳೆ ಇಲ್ಲದೆ ನಷ್ಟವಾಗುತ್ತದೆ. ಕಾಫಿ ಬೆಳೆಯಲು ಲಕ್ಷಾಂತರ ರುಪಾಯಿ ಬಂಡವಾಳ ಹಾಕಿರುವ ಬೆಳೆಗಾರರು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಇವರ ನೆರವಿಗಾಗಿ ಎನ್‌ಡಿಎ ಸರ್ಕಾರ ಸಾಲ ಮರು ಹೊಂದಾಣಿಕೆ ಪ್ಯಾಕೇಜ್(ಎಸ್‌ಟಿಸಿಎಲ್) ಜಾರಿಗೆ ತಂದಿತು. ಅಂದರೆ, ಪಡೆದ ಸಾಲ ಮತ್ತು ಅಸಲು ಒಂದು ಮಾಡಿ ಅದನ್ನು ತೀರಿಸಲು 11 ವರ್ಷಗಳವರೆಗೆ ಕಾಲಾವಕಾಶ ನೀಡಿತ್ತು. ಇದರಿಂದ ಬೆಳೆಗಾರರಿಗೆ ನಿರೀಕ್ಷಿತ ಮಟ್ಟದಲ್ಲಿ ಪ್ರಯೋಜನವಾಗಲಿಲ್ಲ.
 -ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement