'ಬಿಜೆಪಿಯದು ಗರ್ಭಗುಡಿ ಸಂಸ್ಕೃತಿ'
ತರೀಕೆರೆ: ಬಿಜೆಪಿಯದು ಗರ್ಭಗುಡಿ ಸಂಸ್ಕೃತಿ, ಅಲ್ಲಿ ಸಮಾನತೆ ಎನ್ನುವುದು ಕಾಣಲಿಲ್ಲ ಎಂದು ರಾಜ್ಯ ನೇಕಾರರ ಸಂಘದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ನೇತಾರರು. ರಾಜ್ಯದಲ್ಲಿ 60 ಲಕ್ಷ ನೇಕಾರರು ಇದ್ದಾರೆ. ಹೈದರಾಬಾದ್- ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 75ರಷ್ಟು ಜನರಿದ್ದಾರೆ. ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಯೋಜನೆಗಳು ನೆನೆಗುದಿಗೆ ಬೀಳಬಾರದು ಎನ್ನುವ ಉದ್ದೇಶದಿಂದ ಮತ್ತು ನೇಕಾರರ ಅಭಿವೃದ್ಧಿ ಚಿಂತನೆಗೆ ಮುಖ್ಯಮಂತ್ರಿ ನೀಡಿದ ಭರವಸೆ ಮೇಲೆ ಕಾಂಗ್ರೆಸ್ ಸೇರಿದ್ದೇನೆ ಎಂದರು.
ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಎಂ.ಡಿ. ಲಕ್ಷ್ಮೀನಾರಾಯಣರಂತಹ ಪ್ರಭಾವಿ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿರುವುದು ಸಂತೋಷವಾಗಿದೆ ಮತ್ತು ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೋರನಾಳು ಪರಮೇಶ್, ಸಮೀವುಲ್ಲಾ ಷರೀಫ್, ಎಚ್.ಯು. ಫಾರೂಕ್, ರವಿ ಶಾನುಭೋಗ್, ಪುರಸಭಾ ಸದಸ್ಯರಾದ ಪ್ರಕಾಶ್ ವರ್ಮ, ಟಿ.ಎಸ್. ಧರ್ಮರಾಜ್, ಪದ್ಮರಾಜ್, ಟಿ.ಜಿ. ಅಶೋಕ್‌ಕುಮಾರ್, ನಾಗರಾಜ್, ಮೋಹನ್‌ಕುಮಾರ್, ಪರಶುರಾಂ, ಮಹೇಶ್ವರಪ್ಪ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಮತಯಾಚನೆ: ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್, ಶಾಸಕ ಜಿ.ಎಚ್. ಶ್ರೀನಿವಾಸ್, ಪುರಸಭಾ ಸದಸ್ಯರು ಮತ್ತಿತರರು ರೋಡ್ ಶೋ ನಡೆಸಿ ಮತಯಾಚಿಸಿದರು.