ಯುದ್ಧಕ್ಕೆ ಮುಂಚೆಯೇ ಕಾಂಗ್ರೆಸ್ ಶಸ್ತ್ರತ್ಯಾಗ
ನರಸಿಂಹರಾಜಪುರ: ಈ ಲೋಕಸಭಾ ಚುನಾವಣೆ ವೈಯಕ್ತಿಕ ವಿಚಾರ ಇಟ್ಟುಕೊಂಡು ನಡೆಯುವ ಚುನಾವಣೆ ಅಲ್ಲ.ದೇಶದ ಗಡಿ ರಕ್ಷಣೆಗೆ ನಡೆಯುವ ಚುನಾವಣೆ ಎಂದು ಶಾಸಕ ಡಿ.ಎನ್. ಜೀವರಾಜ್ ತಿಳಿಸಿದರು.
ಅವರು ಶನಿವಾರ ಕುದುರೆಗುಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮತಯಾಚಿಸಿದರು. ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಿದೆ. ಆದರೆ, ಕಾಂಗ್ರೆಸ್ ಮುಂದಿನ ಪ್ರಧಾನಿ ಯಾರು? ಅಪ್ಪನಿಂದ ಮಕ್ಕಳಿಗೆ ಜಮೀನಿನ ಖಾತೆ ಬದಲಾಯಿಸಿದಂತೆ ನೆಹರೂ ಕುಟಂಬದವರು ಮತ್ತೆ ಪ್ರಧಾನಿಯಾಗಲು ಹವಣಿಸಿದ್ದಾರೆ. ಯುದ್ಧಕ್ಕೆ ಮುಂಚೆ ಶಸ್ತ್ರತ್ಯಾಗ ಮಾಡುವಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಚುನಾವಣೆಗೆ ಹೆದರುತ್ತಿದ್ದಾರೆ. ಮೇ 16 ನಂತರ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅಕ್ಕಿ ರಾಜಕೀಯ: ಕಾಂಗ್ರೆಸ್ನವರು ಒಂದು ರುಪಾಯಿಗೆ ಅಕ್ಕಿ ಕೊಡುವುದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಒಂದು ರುಪಾಯಿಗೆ ಒಂದು ಕೆಜಿ ಅಕ್ಕಿಯನ್ನು ಬಡವರಿಗೆ ಕೊಟ್ಟಿದ್ದು ಸಂತೋಷವೇ. ಆದರೆ, ಕಳೆದ ತಿಂಗಳು 24 ಕೆ.ಜಿ. ಅಕ್ಕಿ ಕೊಟ್ಟಿದ್ದಾರೆ. ಈ ತಿಂಗಳು ಮಾತ್ರ 30 ಕೆ.ಜಿ. ಅಕ್ಕಿ ಕೊಟ್ಟಿದ್ದಾರೆ.
ಮುಂದಿನ ತಿಂಗಳು 16 ಕೆಜಿ ಅಕ್ಕಿ ಕೊಟ್ಟು ಬಡವರಿಗೆ ಮೋಸ ಮಾಡುತ್ತಾರೆ. ಸೀಮೆಎಣ್ಣೆಗೆ ಏರಿಸಿದ್ದಾರೆ. ಮದ್ಯದ ಬೆಲೆ ಏರಿಕೆಯಾಗಿದೆ. ಒಂದು ಕೈಯಲ್ಲಿ ಹಣ ಕೊಟ್ಟು ಇನ್ನೊಂದು ಕೈಯಲ್ಲಿ ಹಣ ಕಿತ್ತುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸನ್ನು ಟೀಕಿಸಿದರು.
ಬಿಜೆಪಿ ಮುಖಂಡ ಪುಣ್ಯಪಾಲ್ ಮಾತನಾಡಿ, ಭಾರತದ ಗಡಿ ಕಾಯುವ ಸೈನಿಕರಿಗೇ ರಕ್ಷಣೆ ಇಲ್ಲವಾಗಿದೆ.ಅರುಣಾಚಲ ರಾಜ್ಯದ 36 ಸಾವಿರ ಕಿ.ಮೀ. ಪ್ರದೇಶವನ್ನು ಚೀನಾ ದೇಶ ಆಕ್ರಮಣ ಮಾಡಿದೆ. ಆದರೂ ಭಾರತ ದೇಶದ ವಿರೋಧ ಇಲ್ಲ. ಪಾಕಿಸ್ತಾನದ ಸೈನಿಕರು ನಮ್ಮ ದೇಶದ ಗಡಿಯೊಳಗೆ ನುಗ್ಗಿ ಭಾರತೀಯ ಸೈನಿಕರ ರುಂಡ ಕಡಿದು ಪಾಕಿಸ್ಥಾನಕ್ಕೆ ಕೊಂಡೊಯ್ಯುತ್ತಿದ್ದಾರೆ.
ಪ್ರತಿಭಟಿಸುತ್ತಿಲ್ಲ: ಭಾರತಕ್ಕೆ ದಕ್ಕೆಯಾಗುವಂತಹ ಘಟನೆಗಳು ನಡೆದರೂ ಕೇಂದ್ರ ಸರ್ಕಾರ ಪ್ರತಿಭಟಿಸುತ್ತಿಲ್ಲ. ಭಯೋತ್ಪಾದಕರನ್ನು ಮಟ್ಟ ಹಾಕುತ್ತಿಲ್ಲ. ಪಾಕಿಸ್ತಾನದಲ್ಲಿ ಭಾರತ ದೇಶದ ನೋಟುಗಳನ್ನು ಪ್ರಿಂಟು ಹಾಕುತ್ತಿದ್ದಾರೆ. ದೇಶ ಅಭಿವೃದ್ಧಿಯಾಗಬೇಕಾದರೆ ಭಾರತಕ್ಕೆ ಸಮರ್ಥ ಪ್ರಧಾನಿ ಆಗಬೇಕಾಗಿದೆ. ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತ ಯಾಚಿಸಿದರು.
ಜಿಪಂ ಉಪಾಧ್ಯಕ್ಷೆ ಅನ್ನಪೂರ್ಣ, ಕೊಪ್ಪ ತಾಪಂ ಅಧ್ಯಕ್ಷೆ ಪದ್ಮಾವತಿ ರಮೇಶ್, ಎಂ.ಪಿ.ಎಂ.ಸಿ. ಸದಸ್ಯೆ ಮಲ್ಲಿಕಾ ನವೀನ್, ಎನ್.ಆರ್.ಪುರ ತಾಪಂ ಉಪಾಧ್ಯಕ್ಷೆ ಸುಮಿತ್ರಾ, ಬಿಜೆಪಿ ಮುಖಂಡ ಚಕ್ರಪಾಣಿ, ಕೆಸಕೊಡಿಗೆ ಕೃಷ್ಣಮೂರ್ತಿ, ಜಯರಾಜ್, ನಾಗೇಶ್, ಪೂರ್ಣಚಂದ್ರ ಮೊದಲಾದವರು ಉಪಸ್ಥಿತರಿದ್ದರು.