ರಿಮೋಟ್ ಕಂಟ್ರೋಲ್ ಸರ್ಕಾರ ಬೇಕಾ?
ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಏ.13
ಲೂಲಿ ಲಂಗಡಿ(ಕುಂಟುವ), ರಿಮೋಟ್ ಕಂಟ್ರೋಲ್, ವಿದೇಶಿ ದಂಬಡಿ (ವಿದೇಶಿ ಹಣ) ಸರ್ಕಾರ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದರು.
ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ 30 ನಿಮಿಷಗಳ ಕಾಲ ಮಾತನಾಡಿದ ನರೇಂದ್ರ ಮೋದಿ ಅವರು, ದೇಶ, ಪ್ರಾದೇಶಿಕ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದರು.
ನಿಮಗೆ ಲೂಲಿ ಲಂಗಡಿ ಸರ್ಕಾರ ಬೇಕಾ, ರಿಮೋಟ್ ಕಂಟ್ರೋಲ್ ಸರ್ಕಾರ ಬೇಕಾ, ವಿದೇಶಿ ದಂಬಡಿ ಸರ್ಕಾರ ಬೇಕಾ ಎಂಬ ಪ್ರಶ್ನೆಯನ್ನು ಜನರ ಮುಂದಿಟ್ಟು, ಅವರಿಂದಲೇ ಬೇಡ ಎಂಬ ಉತ್ತರ ಪಡೆದ ಮೋದಿ, ನಿಮಗೆ ಸದೃಢ (ಮಜಾಬೂತ್), ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯ ಸರ್ಕಾರವನ್ನು ನಾವು ನೀಡುತ್ತೇವೆ. ನಮ್ಮ ಗುರಿಯನ್ನು ಮುಟ್ಟಲು ನಿಮ್ಮ ಆಶೀರ್ವಾದ ಬೇಕು. ಅದನ್ನು ಪಡೆಯಲು ಬಂದಿದ್ದೇನೆ ಎಂದರು.
ಜನಾಭಿಪ್ರಾಯದ ಚುನಾವಣೆ: ಲೋಕಸಭಾ ಚುನಾವಣಾ ಫಲಿತಾಂಶದ ಸಮೀಕ್ಷೆಯ ಕುರಿತು ಪ್ರಸ್ತಾಪಿದ ನರೇಂದ್ರ ಮೋದಿ, ರಾಜಕೀಯ ಪಂಡಿತರು ಈ ಚುನಾವಣಾ ಫಲಿತಾಂಶದ ಬಗ್ಗೆ ಕೂಡು ಕಳೆಯುವ ಲೆಕ್ಕ ಮಾಡುತ್ತಿದ್ದಾರೆ. ಒಂದಕ್ಕೆ ಮತ್ತೊಂದು ಕೂಡಿಸಿದರೆ ಎರಡಾಗುತ್ತದೆ.
ಇದು, ಗಣಿತ ಲೆಕ್ಕ. ಆದರೆ, ಇದು ದೇಶದ 125 ಕೋಟಿ ಜನಾಭಿಪ್ರಾಯದ ಚುನಾವಣೆ, ತಾವು ರಾಜ್ಯಶಾಸ್ತ್ರದ ವಿದ್ಯಾರ್ಥಿಯಾಗಿದ್ದು, ಇದೊಂದು ರಸಾಯನಶಾಸ್ತ್ರದ ಪ್ರಕಾರ ಒಂದಕ್ಕೆ ಮತ್ತೊಂದು ಕೂಡಿಸುವುದಲ್ಲ. ಒಂದರೊಂದಿಗೆ ಮತ್ತೊಂದು ಸೇರಿಸಿದರೆ ಹನ್ನೊಂದು ಆಗುತ್ತದೆ. ಅದು, ಬಿಜೆಪಿಯ ಲೆಕ್ಕ.
ಸಂಕಷ್ಟದಲ್ಲಿ ರೈತರು: ಈ ದೇಶದ ಪ್ರಧಾನಿಯವರು ಅಮೆರಿಕಾ ಅಧ್ಯಕ್ಷರ ಎದುರು ಗರೀಬ್ ದೇಶ ಎಂದು ಹೇಳಿದ್ದಾರೆ. ಕಾಂಗ್ರೆಸ್ನ ಕೆಲವು ಮುಖಂಡರು ಗರೀಬಿಗಳು. ಲಾಲ್ ಬಹದ್ದೂರ್ ಶಾಸ್ತ್ರಿಯವರು ಜೈ ಜವಾನ್, ಜೈಕಿಸಾನ್ ಎಂದು ಹೇಳಿದ್ದರು.
ಮರ್ ಜವಾನ್, ಮರ್ ಕಿಸಾನ್ ಇದು, ಕಾಂಗ್ರೆಸ್ ಪಕ್ಷದ ಈಗಿನ ಘೋಷಣೆ. ನಮ್ಮ ದೇಶದ ಬಡತನ ನಿರ್ಮೂಲನೆಗಾಗಿ ಈ ಬಾರಿಯ ಚುನಾವಣೆಯಲ್ಲಿ ಮತದಾರರು ನಮ್ಮನ್ನು ಆಶೀರ್ವಾದ ಮಾಡಬೇಕು.
300ಕ್ಕೂ ಹೆಚ್ಚು ಸ್ಥಾನ: ಈ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸುವುದು ಖಚಿತ. ಈಗಾಗಲೇ ದೇಶದ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ನಡೆದಿರುವ ಚುನಾವಣೆಯ ಚಿತ್ರಣ ನೋಡಿದರೆ, ಕಾಂಗ್ರೆಸ್ ಪಕ್ಷ ಎರಡಂಕಿ ಪಡೆಯಲು ಸಾಧ್ಯವಿಲ್ಲ. ನಿಮ್ಮ ಕನಸು, ನಮ್ಮ ಕನಸು, ನಿಮ್ಮ ಸಮಸ್ಯೆ, ನಮ್ಮ ಸಮಸ್ಯೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಮೋದಿಯವರು ಕರೆ ನೀಡಿದರು.
ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಡಿ.ಬಿ. ಚಂದ್ರೇಗೌಡ, ಶಾಸಕರಾದ ಸಿ.ಟಿ. ರವಿ, ಡಿ.ಎನ್. ಜೀವರಾಜ್, ವಿ. ಸುನೀಲ್ಕುಮಾರ್, ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.