ಬಹಿರಂಗ ಪ್ರಚಾರಕ್ಕೆ ಕೊನೆ ದಿನ ಇಂದು
ಚಿಕ್ಕಮಗಳೂರು: ಚುನಾವಣಾ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಕೊನೆಯ ದಿನ. ಸಂಜೆ 5 ಗಂಟೆಯೊಳಗೆ ಬಹಿರಂಗ ಪ್ರಚಾರ ಕಾರ್ಯ ಪೂರ್ಣಗೊಳ್ಳಲಿದೆ.
ಈಗಾಗಲೇ ಜಿಲ್ಲೆಯಲ್ಲಿ ಎರಡು ಬಾರಿ ಚುನಾವಣಾ ಪ್ರಚಾರ ಮುಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಮಂಗಳವಾರ ಚಿಕ್ಕಮಗಳೂರು ನಗರದಲ್ಲಿ ರೋಡ್ ಶೋ ಹಾಗೂ ಬಹಿರಂಗ ಪ್ರಚಾರದ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಪರ ಮತಯಾಚನೆ ಮಾಡಲಿದ್ದಾರೆ.
ಮಂಗಳವಾರ ಬೆಳಗ್ಗೆ 10 ಗಂಟೆಗೆ ನಗರದ ಕೆಇಬಿ ವೃತ್ತದಿಂದ ಹೊರಡಲಿರುವ ಕಾಂಗ್ರೆಸ್ ರೋಡ್ ಶೋ ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತದ ಮೂಲಕ ಎಂ.ಜಿ. ರಸ್ತೆಯಿಂದ ಜಿಲ್ಲಾ ಆಟದ ಮೈದಾನಕ್ಕೆ ತಲುಪಲಿದೆ. ಈ ರೋಡ್ ಶೋನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಪಕ್ಷದ ಹಿರಿಯ ಮುಖಂಡರಾದ ಇಬ್ರಾಹಿಂ ಪಾಲ್ಗೊಳ್ಳಲಿದ್ದಾರೆ.
ರೋಡ್ ಶೋ ಬಳಿಕ ಜಿಲ್ಲಾ ಆಟದ ಮೈದಾನದಲ್ಲಿ ಬೆಳಗ್ಗೆ 11.30ಕ್ಕೆ ಚುನಾವಣಾ ಪ್ರಚಾರ ಬಹಿರಂಗ ಸಭೆ ನಡೆಯಲಿದೆ.
ಶಕ್ತಿ ಪ್ರದರ್ಶನ: ನಗರದ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರದಂದು “¸eæ¯ VæÆÇÒ’ ರ್ಯಾಲಿಯ ಮೂಲಕ ಬಿಜೆಪಿ ತನ್ನ ಶಕ್ತಿಯನ್ನು ಪ್ರದರ್ಶನ ಮಾಡಿತ್ತು.
ಮಂಗಳವಾರ ಇದೇ ಸ್ಥಳದಲ್ಲಿ ಕಾಂಗ್ರೆಸ್ ಪಕ್ಷ ಪ್ರಚಾರ ರ್ಯಾಲಿ ಏರ್ಪಡಿಸಿ ತನ್ನ ಶಕ್ತಿ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಈ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪಕ್ಷ ಕರೆ ನೀಡಿದೆ. ಒಟ್ಟಾರೆ ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಶಕ್ತಿ ಪ್ರದರ್ಶನದ ವೇದಿಕೆಯಾಗಿದೆ.
ಪ್ರಚಾರದ ಕೊನೆಯ ದಿನದಂದು ಬಿಜೆಪಿ ಮಾಗಡಿಯ ಮಯೂರು ಕಲಾರಂಗ ತಂಡದಿಂದ ನಗರದ ಏಳೆಂಟು ಕಡೆಗಳಲ್ಲಿ ಬೀದಿ ನಾಟಕದ ಮೂಲಕ ಮತಯಾಚನೆಯ ಕಾರ್ಯಕ್ರಮ ಆಯೋಜಿಸಿದೆ. ಇಲ್ಲಿನ ಆಜಾದ್ ಪಾರ್ಕ್ ವೃತ್ತದಲ್ಲಿ ಬೀದಿ ನಾಟಕ ಪ್ರದರ್ಶನ ಆರಂಭಗೊಳ್ಳಲಿದೆ.