ರಾಷ್ಟ್ರೀಯ ಪಕ್ಷ ದೇಶಕ್ಕೆ ಮಾರಕ
ಬಾಳೆಹೊನ್ನೂರು: ರಾಷ್ಟ್ರೀಯ ಪಕ್ಷಗಳು ದೇಶಕ್ಕೆ ಮಾರಕವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ಕೇಂದ್ರದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಏರುವುದು ಖಚಿತ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿ. ಧನಂಜಯಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಜೇಸಿ ವೃತ್ತದ ಬಳಿ ಭಾನುವಾರ ಸಂಜೆ ಆಯೋಜಿಸಿದ್ದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿ, ಸ್ಥಳೀಯ ಸಮಸ್ಯೆ ಮುಂದಿಟ್ಟು ಚುನಾವಣೆ ಎದುರಿಸುವುದು ಬಿಟ್ಟು, ರಾಷ್ಟ್ರೀಯ ಪಕ್ಷಗಳು ದೇಶಕ್ಕಾಗಿ ಚುನಾವಣೆ ನಡೆಯುತ್ತಿದೆ ಎಂದು ಜನರನ್ನು ದಾರಿ ತಪ್ಪಿಸುತ್ತಿರುವುದು ಆತಂಕಕಾರಿಯಾಗಿದೆ ಎಂದರು.
ಕಾರ್ಯಗತಗೊಂಡಿಲ್ಲ: ಕಳೆದ ಬಾರಿಯ ಲೋಕಸಭಾ ಉಪ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಇಡೀ ತಂಡವೇ ಜಿಲ್ಲೆಗೆ ಬಂದು ಅಡಕೆ ಹಳದಿ ಎಲೆ ರೋಗದ ಕುರಿತು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಗೋರಕ್‌ಸಿಂಗ್ ವರದಿ ಜಾರಿಗೊಳಿಸಿ, ಬೆಳೆಗಾರರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಎರಡು ವರ್ಷಗಳಾದರೂ ಕಾರ್ಯಗತಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದರು.
ಅನಾದಿ ಕಾಲದಿಂದಲೂ ಶುಭ ಕಾರ್ಯಗಳಿಗೆ ಉಪಯೋಗಿಸುತ್ತಿದ್ದ ಅಡಕೆಗೆ ಕೇಂದ್ರ ಸರ್ಕಾರ ಹಾನಿಕಾರಕ ವಸ್ತು ಎಂದು ಹೇಳಿದೆ. ಸುಪ್ರೀಂ ಕೋರ್ಟ್ ಅಧ್ಯಯನ ಮಾಡಿ ವರದಿ ನೀಡಲು ಕೇಳಿದರೆ ಅಡಕೆ ಹಾನಿಕಾರಕ ಎಂದು ವರದಿ ನೀಡಿದೆ. ಇದರಿಂದ ಸಾವಿರಾರು ಅಡಕೆ ಬೆಳೆಗಾರರು ಬೀದಿಪಾಲಾಗಲಿದ್ದಾರೆ ಎಂದರು.
ಬಿಜೆಪಿ ಕಾರಣ: ಈ ಭಾಗದ ಪ್ರಮುಖ ಸಮಸ್ಯೆಯಾದ ಒತ್ತುವರಿಗೆ ಸಮಸ್ಯೆಗೆ ಬಿಜೆಪಿ ಕಾರಣವಾಗಿದ್ದು, ಡಿ.ವಿ. ಸದಾನಂದಗೌಡ ನೇತೃತ್ವದ ಸರ್ಕಾರ ಒತ್ತುವರಿ ಖುಲ್ಲಾ ಮಾಡಿ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿಸಲಾಗುವುದು ಎಂದು ಎಂದು ಕೋರ್ಟ್‌ಗೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಉದ್ಬವಿಸಿದ್ದು, ಅರಣ್ಯ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.
ನೈತಿಕತೆ ಇಲ್ಲ: ಕೇಂದ್ರದ ಯುಪಿಎ ಸರ್ಕಾರವು ಭ್ರಷ್ಟಾಚಾರ, ಹಗರಣಗಳ ಗೂಡಾಗಿದ್ದು, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ನೀಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ. ರಾಜ್ಯದ ಹಿಂದಿನ ಬಿಜೆಪಿ ಸರ್ಕಾರವೂ ಭ್ರಷ್ಟಾಚಾರದ ಮಾಲೆಯನ್ನೆ ಹೊಂದ್ದಿದ್ದು, ಮುಖ್ಯಮಂತ್ರಿ, ಸಚಿವರಾದಿಯಾಗಿ ಶಾಸಕರೂ ಸೆರೆಮನೆ ವಾಸ ಅನುಭವಿಸಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗೆ ಮತ ಕೇಳುವ ಯಾವ ನೈತಿಕತೆಯೂ ಉಳಿದಿಲ್ಲ ಎಂದು ಆರೋಪಿಸಿದರು.
ಹಾಸ್ಯಾಸ್ಪದ: ಬಿಜೆಪಿ, ಕಾಂಗ್ರೆಸ್‌ನವರು ತಮ್ಮ ಸರ್ಕಾರಗಳ ಸಾಧನೆಗಳ ಆಧಾರದಲ್ಲಿ ಮತ ಕೇಳುವುದು ಬಿಟ್ಟು, ವ್ಯಕ್ತಿಯ ಹೆಸರಿನಲ್ಲಿ ಮತ ಕೇಳುವುದು ಹಾಸ್ಯಾಸ್ಪದವಾಗಿದೆ ಎಂದು ಲೇವಡಿ ಮಾಡಿದ ಅವರು, ಚಿಕ್ಕಮಗಳೂರು- ಕಡೂರು ರೇಲ್ವೆ ಯೋಜನೆಯು ಕಾಂಗ್ರೆಸ್ ಅಥವಾ ಮಲ್ಲಿಕಾರ್ಜುನ ಖರ್ಗೆಯವರ ಕೊಡುಗೆಯಲ್ಲ. ಇದು ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಎಂದು ತಿಳಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ, ಮುಖಂಡರಾದ ಕಣಿವೆ ವಿನಯ್, ಕೆ.ಟಿ. ಗೋವಿಂದೇಗೌಡ, ಜಿನ್ನಪ್ಪ, ಮಾಗೋಡು ಮಂಜುನಾಥ್ ಉಪಸ್ಥಿತರಿದ್ದರು.