ರಾಜಕೀಯ ಲಾಭಕ್ಕೆ ಬಿಜೆಪಿ ಅಡಕೆ ಬಳಕೆ
ಚಿಕ್ಕಮಗಳೂರು: ಅಡಕೆ ವಿಷಯವನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಆರೋಪಿಸಿದ್ದಾರೆ.
ಅಡಕೆ ಕುರಿತು ಕೇಂದ್ರ ಸರ್ಕಾರದ ಸಾಲಿಸಿಟರಿ ಜನರಲ್ ಇಂದಿರಾ ಜೈ ಸಿಂಗ್ ಅವರು ಸುಪ್ರೀಂಕೋರ್ಟ್ನಲ್ಲಿ ನೀಡಿರುವ ಹೇಳಿಕೆ ಹಾಗೂ ನ್ಯಾಯಾಲಯ ಹೊರಡಿಸುವ ಸೂಚನೆಯನ್ನು ಬಿಜೆಪಿಯವರು ಅವರ ವಕೀಲರನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಲಿ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿರುಗೇಟು ನೀಡಿದರು.
ಅಡಕೆ ನಿಷೇಧ ಕುರಿತು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದೆ. ತಮ್ಮ ಈ ಹೇಳಿಕೆ ಸುಳ್ಳಾದರೆ ತಾವು ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಶಾಸಕ ಸಿ.ಟಿ. ರವಿ ಸವಾಲು ಹಾಕಿದ್ದರು. ಅವರ ವಕೀಲರಿಂದ ದೃಢಪಡಿಸಿಕೊಂಡು ರವಿಯವರು ಮಾತಿಗೆ ಬದ್ಧರಾಗಬೇಕೆಂದು ಹೇಳಿದರು.
ಅಡಕೆ ನಿಷೇಧ ಕುರಿತು ಏ.16 ರಂದು ನಗರದಲ್ಲಿ ಬಹಿರಂಗ ಚರ್ಚೆಗೆ ಬಿಜೆಪಿ ಆಹ್ವಾನ ನೀಡಿತ್ತು. ಇದಕ್ಕೆ ತಾವು ಸಹ ಸಿದ್ಧವಿರುವುದಾಗಿ ಹೇಳಿದ ಜಯಪ್ರಕಾಶ್ ಹೆಗ್ಡೆ, ಬಹಿರಂಗ ಪ್ರಚಾರ ಮುಕ್ತಾಯವಾದ ನಂತರದಲ್ಲಿ ಈ ರೀತಿಯ ಬಹಿರಂಗ ಚರ್ಚೆಗೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಭಾಗಶಃ ಈ ವಿಷಯ ತಿಳಿದು ಬಿಜೆಪಿಯವರು ಈ ದಿನಾಂಕವನ್ನು ನಿಗದಿಪಡಿಸಿರಬಹುದು ಎಂದು ಆರೋಪಿಸಿದರು.
ಅಡಕೆಯಲ್ಲಿ ವಿಷಕಾರಿಕ ವಸ್ತುಗಳಿವೆ ಎಂಬ ಗೊಂದಲ ನಿರ್ಮಾಣಗೊಂಡಿದ್ದು ಎನ್.ಡಿ.ಎ. ಸರ್ಕಾರದ ಅವಧಿಯಲ್ಲಿ, ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಯುಪಿಎ ಸರ್ಕಾರ ಹಲವು ಹಂತದಲ್ಲಿ ಕ್ರಮ ವಹಿಸಿದೆ. ಗುಟ್ಕಾ, ಪಾನ್ ಮಸಲಾ ಸೇರಿದಂತೆ ಇತರೆ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದ್ದು, ಇದರ ಆಧಾರದ ಮೇಲೆ ತಜ್ಞರ ಸಮಿತಿಯನ್ನು ರಚನೆ ಮಾಡಿ ವರದಿ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ ಎಂದ ಜಯಪ್ರಕಾಶ್ ಹೆಗ್ಡೆ, ಕೇಂದ್ರ ಸರ್ಕಾರ ಸ್ವ ಇಚ್ಛೆಯಿಂದ ಈ ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಉಪಸ್ಥಿತರಿದ್ದರು.
ಹೆಗ್ಡೆ ಪರ ಮಹಾ ಎಂಎಲ್ಸಿ ಸಪ್ರ ಮತಯಾಚನೆ
ತರೀಕೆರೆ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರವಾಗಿ ಮಹಾರಾಷ್ಟ್ರ ಎಂ.ಎಲ್.ಸಿ. ಚರಣ್ಸಿಂಗ್ ಸಪ್ರ, ಶಾಸಕ ಜಿ.ಎಚ್. ಶ್ರೀನಿವಾಸ್, ಪುರಸಭಾ ಸದಸ್ಯರಾದ ಧರ್ಮರಾಜ್, ಟಿ.ಜಿ. ಅಶೋಕ್ಕುಮಾರ್, ಪ್ರಕಾಶ್ ವರ್ಮ, ಮೋಹನ್ಕುಮಾರ್ ಮತ್ತು ನೂರಾರು ಕಾರ್ಯಕರ್ತರೊಡಗೂಡಿ ಮಾರಿಗದ್ದುಗೆ ಸರ್ಕಲ್ನಿಂದ ರೋಡ್ ಶೋ ನೆಡೆಸಿ ಮತಯಾಚಿಸಿದರು.
ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಕ್ಷೇತ್ರದಲ್ಲಿ ಅಲ್ಪ ಅವಧಿಯಲ್ಲೇ ಹೆಚ್ಚು ಅನುದಾನ ನೀಡಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದ್ದಾರೆ,
ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವುದರ ಮೂಲಕ ಅವರನ್ನು ಗೆಲ್ಲಿಸಬೇಕೆಂದು ಅವರು ಕೋರಿದರು. ಈ ಸಂದರ್ಭದಲ್ಲಿ ಹಲವರು ಭಾಗವಹಿಸಿದ್ದರು.