ಸಿಎಂ ಪ್ರಮಾಣ ವಚನ ಸ್ವೀಕರಿಸಿದ ಗಂಟೆಯೊಳಗೆ ಅನ್ನಭಾಗ್ಯ: ಸಚಿವ ರತ್ನಾಕರ್
ನರಸಿಂಹರಾಜಪುರ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ಗಂಟೆಯೊಳಗೆ ಬಿ.ಪಿ.ಎಲ್. ಕಾರ್ಡುದಾರರಿಗೆ ರು. 1 ಕ್ಕೆ ಕೆಜಿ ಅಕ್ಕಿ ನೀಡುವ ಯೋಜನೆ ಘೋಷಣೆ ಮಾಡಿರುವುದನ್ನು ಬಡವರು ಈಗ ನೆನಪು ಮಾಡಿಕೊಳ್ಳಬೇಕು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಅವರು ಸೋಮವಾರ ರಾತ್ರಿ ಪಟ್ಟಣದ ಕೆನರಾ ಬ್ಯಾಂಕ್ ಹಳೇ ಕಟ್ಟಡದ ಪಕ್ಕದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡಿದರು.
ಸಾಲಮನ್ನಾ ಘೋಷಣೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರೈತರಿಗೆ ರು. 25,000 ಸಾಲಮನ್ನಾ ಘೋಷಣೆ ಮಾಡಿತ್ತು. ಆದರೆ ಹಣ ಇಟ್ಟಿರಲಿಲ್ಲ. ಕಾಂಗ್ರೆಸ್ ಸರ್ಕಾರ ರೈತರಿಗಾಗಿ ರು. 3,800 ಕೋಟಿ ಸಹಕಾರ ಸಂಘಗಳಿಗೆ ಸಂದಾಯ ಮಾಡಿದೆ. ಅಂಬೇಡ್ಕರ್ ನಿಗಮ, ದೇವರಾಜು ಅರಸು ನಿಗಮ, ಅಲ್ಪಸಂಖ್ಯಾತರ ನಿಗಮಗಳು ನೀಡಿದ ರು. 4,200 ಕೋಟಿ ಸಾಲವನ್ನು ಮನ್ನಾ ಮಾಡಿದ್ದೇವೆ. ಕಾಂಗ್ರೆಸ್‌ಗೆ ಈ ಬಾರಿ ಚುನಾವಣೆಯಲ್ಲಿ ಮತ ಕೇಳಲು ಯಾವುದೇ ಅಂಜಿಕೆ ಇಲ್ಲ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 65 ಲಕ್ಷ ಮಕ್ಕಳಿಗೆ ಪೌಷ್ಟಿಕಾಂಶ ಕೊರತೆ ಇತ್ತು. ರು. 400 ಕೋಟಿ ವೆಚ್ಚದಲ್ಲಿ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ವಿದ್ಯುತ್ ಸಂಪರ್ಕ ಪಡೆದವರ ಸಾಲ ಮನ್ನಾ ಮಾಡಲಾಗಿದೆ. ಆಶ್ರಯ ಮನೆ ಯೋಜನೆಯಡಿ ಬಡವರ ರು. 1,700 ಕೋಟಿ ಸಾಲ ಬಾಕಿ ಇತ್ತು ಇದನ್ನು ಕಾಂಗ್ರೆಸ್ ಸರ್ಕಾರ ಮನ್ನಾ ಮಾಡಿದೆ ಎಂದವರು ಹೇಳಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಪ್ರತಿ ಚುನಾವಣೆಯಲ್ಲೂ ಬಿಜೆಪಿ ರಾಮನ ಜಪ ಮಾಡುತ್ತಾ ಜನರ ಭಾವನೆ ಕೆರಳಿಸುತ್ತಿದೆ. ರಾಮಮಂದಿರ ಕಟ್ಟಿದರೆ ಬಡವರ ಕಷ್ಟಗಳು, ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆಯೇ ಎಂದು ಪ್ರಶ್ನೆ ಮಾಡಿದರು. ಬಿಜೆಪಿಗೆ ಕಣ್ಣು, ಕಿವಿ ಇದ್ದರೆ ಕಾಂಗ್ರೆಸ್ ಸಾಧನೆಯನ್ನು ಸರಿಯಾಗಿ ನೋಡಲಿ ಎಂದವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ರಮೇಶ ಹೆಗಡೆ, ಮಾಜಿ ಶಾಸಕ ಸ್ವಾಮಿರಾವ್, ಮಾಜಿ ಶಾಸಕ ಪಟ್ಟಮಕ್ಕಿ ರತ್ನಾಕರ್, ರಾಜ್ಯಸಭಾ ಮಾಜಿ ಸದಸ್ಯೆ ಬಿಂಬಾ ರಾಯ್ಕರ್, ಕಾಂಗ್ರೆಸ್ ಮುಖಂಡ ಟಿ.ಡಿ. ರಾಜೇಗೌಡ, ಡಾ.ಕೆ.ಪಿ. ಅಂಶುಮಂತ್, ಕು. ಗೀತಾ, ಆದಿಲ್, ಕೆ.ವಿ. ವಸಂತಕುಮಾರ್, ಎಂ.ಆರ್. ರವಿಶಂಕರ್, ಲೇಖಾ ವಸಂತ್, ಬಿ.ಎಸ್. ಸುಬ್ರಮಣ್ಯ, ಎಂ.ಎಸ್. ಚೆನ್ನಕೇಶವ, ಪಿ.ಆರ್. ಸುಕುಮಾರ್, ಕೆ.ಎ. ಅಬೂಬಕರ್, ಇ.ಸಿ. ಶೇವಿಯಾರ್ ಮೊದಲಾದವರು ಇದ್ದರು.
ಇದಕ್ಕೂ ಮೊದಲು ಕಾಂಗ್ರೆಸ್ ಮುಖಂಡರು ಬಸ್ತಿಮಠದಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.