ಕಾಂಗ್ರೆಸ್ ಅಭ್ಯರ್ಥಿ ಮಂಜುಗೆ ಮುನ್ನಡೆ: ನಂಜಪ್ಪ ವಿಶ್ವಾಸ
ಕ.ಪ್ರ.ವಾರ್ತೆ, ಕೊಪ್ಪ, ಏ. 18
ಎಲ್ಲ ವರ್ಗಗಳೂ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಮತ ನೀಡಿರುವುದರಿಂದ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಸನ ಲೋಕಸಭಾ ಅಭ್ಯರ್ಥಿ ಎ.ಮಂಜು 10 ಸಾವಿರಕ್ಕಿಂತಲೂ ಹೆಚ್ಚಿನ ಮತಗಳ ಮುನ್ನಡೆ ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಕಡೂರು ಸಿ.ನಂಜಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯವನ್ನು ಹಸಿವು ಮುಕ್ತವನ್ನಾಗಿ ಮಾಡಲು ಅನ್ನಭಾಗ್ಯ ಯೋಜನೆ ಹಾಗು ಶಾಲಾ ಮಕ್ಕಳಿಗೆ ಹಾಲು ವಿತರಣೆಯ ಕ್ಷೀರಭಾಗ್ಯ ಯೋಜನೆ, ಹಿಂದುಳಿದ, ಪ.ಜಾತಿ, ಪ.ಪಂಗಡ ಸಾಲಮನ್ನಾ ಸೇರಿದಂತೆ ಹಿಂದುಳಿದ, ಅಲ್ಪಸಂಖ್ಯಾತರು, ದಲಿತರು ಮತ್ತು ಶೋಷಿತರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಅನೇಕ ಕಾರ್ಯಕ್ರಮ ರೂಪಿಸಿದ್ದಾರೆ. ಅವೆಲ್ಲವುಗಳ ಪರಿಣಾಮ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮುನ್ನಡೆ ಸಾಧಿಸಲು ನೆರವಾಗಲಿವೆ. ಸರ್ಕಾರದ ಜನಪರ ಕಾರ್ಯಕ್ರಮಗಳು ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲು ಕಾರಣವಾಗಿದೆ ಎಂದರು.
ಮಂಜು ಪರ ಬೆಂಬಲ: ಕಡೂರು ಕ್ಷೇತ್ರದಲ್ಲಿ ಕಳೆದ ಬಾರಿ ಪಕ್ಷದಲ್ಲಿದ್ದ ಸಣ್ಣಪುಟ್ಟ ಆಂತರಿಕ ಭಿನ್ನಮತದಿಂದಾಗಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಹಿಂದೆ ಬೀಳುವ ಮೂಲಕ ಪಕ್ಷವು ಸೋಲು ಅನುಭವಿಸಬೇಕಾಯಿತು. ಆದರೆ, ಈ ಬಾರಿ ಕಡೂರು ಕ್ಷೇತ್ರದ ಕಡೂರು- ಬೀರೂರು ಬ್ಲಾಕ್ ಕಾಂಗ್ರೆಸ್ ಘಟಕಗಳು ಒಟ್ಟಾಗಿ ಕೆಲಸ ಮಾಡಿ ಎಲ್ಲ ಮುಖಂಡರು ತಮ್ಮ ಆಂತರಿಕ ಭಿನ್ನಮತ ಮರೆತು ಪಕ್ಷದ ಪರವಾಗಿ ಕೆಲಸ ಮಾಡಿ ಮಂಜು ಅವರ ಗೆಲವಿಗೆ ದುಡಿದಿದ್ದಾರೆ ಎಂದರು.
ಅದರಲ್ಲೂ ಮಾಜಿ ಶಾಸಕರು ಹಾಗೂ ಪಕ್ಷದ ಮುಖಂಡರಾದ ಕೆ.ಬಿ. ಮಲ್ಲಿಕಾರ್ಜುನ್ ಅವರು ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಮೂಲಕ ಕಡೂರು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಎ.ಮಂಜು ಅವರಿಗೆ ಹೆಚ್ಚಿನ ಮತ ಕೊಡಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಉತ್ತಮ ಸಾಧನೆ ಹಾಗೂ ಸಂಘಟನೆಗೆ ಸಾಕ್ಷಿ. ಕಡೂರು ಬೀರೂರು ಬ್ಲಾಕ್ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು ಕೇವಲ ಪಟ್ಟಣಗಳಲ್ಲಿರದೆ ಸಂಘಟನೆ ದೃಷ್ಟಿಯಿಂದ ಗ್ರಾಮಾಂತರ ಪ್ರದೇಶಗಳಲ್ಲೂ ಸಂಚರಿಸಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕು. ಅದಕ್ಕೆ ಪಕ್ಷದ ಎಲ್ಲ ಮುಖಂಡರ ಸಲಹೆ ಹಾಗೂ ಸಹಕಾರದಿಂದ ಪಕ್ಷ ಸಂಘಟಿಸಬೇಕು. ಇದರಿಂದ ಮುಂದೆ ಬರಲಿರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಇನ್ನಷ್ಟು ಗಟ್ಟಿಯಾಗಲಿದೆ.
ಈ ಬಾರಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡುವ ಮೂಲಕ ಕ್ಷೇತ್ರದಲ್ಲಿ ಶೇ. 66.19 ರಷ್ಟು ಮತದಾನ ನಡೆದು ಯಾವುದೇ ಅಹಿತಕರ ಘಟನೆಗೆ ಆಸ್ಪದ ಇಲ್ಲದಂತೆ ಚುನಾವಣೆ ಶಾಂತಿಯುತವಾಗಿ ನಡೆದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಡೂರು ಹಾಗೂ ಬೀರೂರು ಬ್ಲಾಕ್ ಮುಖಂಡರಾದ ಎಂ.ಎಚ್. ಚಂದ್ರಪ್ಪ, ಕೆ.ಎಂ.ವಿನಾಯಕ, ಮುಖಂಡರಾದ ಕೆ.ಎಸ್. ಆನಂದ್, ಕೆ.ಜಿ. ಶ್ರೀನಿವಾಸಮೂರ್ತಿ, ಎಂ.ಸೋಮಶೇಖರ್, ಶರತ್, ವೈ.ಎಂ. ತಮ್ಮಯ್ಯ, ಪಂಚನಹಳ್ಳಿ ಪ್ರಸನ್ನ, ಬಾಸೂರು ಚಂದ್ರಮೌಳಿ ಮತ್ತಿತರರು ಉಪಸ್ಥಿತರಿದ್ದರು.