ನಕ್ಸಲ್ ಶಂಕೆ: ಪೊಲೀಸರ ಗುಂಡಿಗೆ ವ್ಯಕ್ತಿ ಬಲಿ
ಕ.ಪ್ರ.ವಾರ್ತೆ ್ಣ ಶೃಂಗೇರಿ ್ಣ ಏ. 19
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮಂಗಳೂರು ಶಿವಮೊಗ್ಗ ರಾಷ್ರೀಯ ಹೆದ್ದಾರಿ 13ರ ಕೆರೆಕಟ್ಟೆ ತನಿಕೋಡು ಅರಣ್ಯ ತನಿಖಾ ತಪಾಸಣಾ ಕೇಂದ್ರದ ಬಳಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಮೃತಪಟ್ಟ ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ.
ಮೃತ ವ್ಯಕ್ತಿ ಮಂಗಳೂರು ಮೂಲದ ಕಬೀರ್(26) ಎನ್ನಲಾಗಿದೆ. ಶೃಂಗೇರಿ ಕಡೆಯಿಂದ ಮಂಗಳೂರು ಕಡೆಗೆ ಜಾನುವಾರುಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಮಹೀಂದ್ರ ಪಿಕ್ಅಪ್ ವಾಹನ ನಸುಕಿನ ವೇಳೆ 3.30 ಕ್ಕೆ ಚಕ್ ಪೋಸ್ಟ್ ಬಳಿ ನಿಂತಿದೆ. ವಾಹನದಿಂದ ಕೆಳಗಿಳಿದ ಕಬೀರ್ ಪಾಸ್ ಪಾಸ್ ತೆಗೆದುಕೊಳ್ಳಲು ಕೆಳಗಿಳಿದನೆನ್ನಲಾಗಿದೆ. ಇದೇ ವೇಳೆ ಅಲ್ಲಿದ್ದ ಎಎನ್ಎಫ್ಸಿ ಸಿಬ್ಬಂದಿಯೊಬ್ಬನನ್ನು ಕಂಡು ಪರಾರಿಯಾಗಲು ಯತ್ನಿಸಿದ್ದಾನೆ.
ಗುಂಡಿಗೆ ಬಲಿ: ಕೂಡಲೇ ಕಾರ್ಯಪ್ರವೃತ್ತನಾದ ಸಿಬ್ಬಂದಿ ಅನುಮಾನಗೊಂಡು ಆತ ನಕ್ಸಲ್ ಇರಬಹುದೆಂದು ಭಾವಿಸಿ ಗುಂಡು ಹಾರಿಸಿದನೆನ್ನಲಾಗಿದೆ. ಗುಂಡೇಟು ತಿಂದು ಕೂಡಲೇ ನೆಲಕ್ಕುರುಳಿದ್ದಾನೆ. ರಸ್ತೆಯ ಮೇಲೆ ರಕ್ತದ ಕುರುಹುಗಳಿದ್ದು, ಮೇಲ್ಭಾಗದಲ್ಲಿದ್ದ ವಿದ್ಯುತ್ ತಂತಿ ತುಂಡಾಗಿದೆ. ಗುಂಡಿನ ಶಬ್ಬ ಕೇಳಿ ವಾಹನದಲ್ಲಿದ್ದ ಮೂವರು ಪರಾರಿಯಾದರೆ. ಇನ್ನೊಬ್ಬ ಸೆರೆಸಿಕ್ಕಿದ್ದಾನೆ. ಗುಂಡೇಟು ತಗುಲಿದ ವ್ಯಕ್ತಿ ಸ್ಥಳದಲ್ಲಿಯೇ ಅಸುನೀಗಿದ್ದಾನೆ.
ಸ್ಥಳಕ್ಕೆ ಉನ್ನತ ಪೋಲೀಸ್ ಅಧಿಕಾರಿಗಳು ದೌಡಾಯಿಸಿ ಮುಂಜಾಗೃತಾ ಕ್ರಮವಾಗಿ ಪೋಲೀಸ್ ಬಂದೇಬಸ್ತ್ ಮಾಡಲಾಗಿದೆ. ಶವವನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸ್ಥಳಕ್ಕೆ ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಯಿತು.
ಮಾಮೂಲು ವ್ಯವಹಾರ: ರಾತ್ರಿ ಪಾಳಯದಲ್ಲಿದ್ದ ತನಿಖಾ ಸಿಬ್ಬಂದಿಗಳನ್ನು ಅವಧಿಗೆ ಮೊದಲೇ ಬದಲಾಯಿಸಲಾಗಿತ್ತು. ಈ ಮಾರ್ಗದಲ್ಲಿ ಅಕ್ರಮ ಜಾನುವಾರ ಸಾಗಾಟ ನಿತ್ಯ ಹೊಂದಾಣಿಕೆಯಿಂದ ನಿರಂತರವಾಗಿ ನಡೆಯುತ್ತಿತ್ತೆನ್ನಲಾಗಿದೆ. ಮಾಮೂಲಿ ಸಿಬ್ಬಂದಿಯಿಲ್ಲದ ಕಾರಣ ಜಾನುವಾರು ಸಾಗಣೆದಾರರು ತಾವು ಬಂದ ಕಾರ್ಯ ಆಗಲಿಲ್ಲವೆಂದು ಕೈಚೆಲ್ಲಿ ಹಿಂತಿರುಗುವ ವೇಳೆ ಅವರನ್ನು ನಕ್ಸಲರೆಂದು ಭಾವಿಸಿ ಎಎನ್ಎಫ್ ಪಡೆ ಗುಂಡು ಹಾರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮೃತ ವ್ಯಕ್ತಿ ಸಂಬಂಧಿಕರು ಆಸ್ಪತ್ರೆಗೆ ಹೋಗುವಾಗ ಅವರ ವಾಹನವನ್ನು ಅಡ್ಡಗಟ್ಟಿದ ಕಿಡಿಗೇಡಿಗಳು ಕಲ್ಲು ತೂರಿ ಜಖಂ ಗೊಳಿಸಿದ್ದಾರೆ. ವಾಹನದಲ್ಲಿಜದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಜಾನುವಾರಿಗೆ ನೀರಿಲ್ಲ: ವಾಹನದಲ್ಲಿದ್ದ ಜಾನುವಾರುಗಳು ನೀರು, ಆಹಾರವಿಲ್ಲದೇ ಪರದಾಡುತ್ತಿದ್ದರೂ ಪೊಲೀಸರು ಅವುಗಳ ರಕ್ಷಣೆಗೆ ಮುಂದಾಗಲಿಲ್ಲ. ಇತರರಿಗೂ ಅವಕಾಶವನ್ನೇ ನೀಡಲಿಲ್ಲ.
ಗುಂಡಿನ ದಾಳಿಯ ಘಟನೆಯ ಬಗ್ಗೆ ಪೋಲೀಸ್ ಠಾಣೆ, ಆಸ್ಪತ್ರೆಯಲ್ಲಿ ಯಾವುದೇ ಮಾಹಿತಿ ನೀಡುತ್ತಿಲ್ಲ.