ನಕ್ಸಲ್‌ಪೀಡಿತ ಪ್ರದೇಶದಲ್ಲಿ ಗುರಿ ತಪ್ಪುತ್ತಿರುವ ಪೊಲೀಸರು
ಚಿಕ್ಕಮಗಳೂರು: ುಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ 12 ವರ್ಷಗಳಿಂದ ಬೇರು ಬಿಟ್ಟಿರುವ ನಕ್ಸಲೀಯರನ್ನು ದಮನ ಮಾಡಲು ಸ್ಥಾಪಿತವಾದ ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್) ಗುರಿ ತಪ್ಪಿದೆಯಾ..,
ಶೃಂಗೇರಿ ತಾಲೂಕಿನ ತನಿಕೋಡು ಅರಣ್ಯ ಚೆಕ್ ಪೋಸ್ಟ್‌ನಲ್ಲಿ ಶುಕ್ರವಾರ ರಾತ್ರಿ ಎಎನ್‌ಎಫ್ ಸಿಬ್ಬಂದಿ ಓರ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಕಾರಣಕ್ಕಾಗಿ ಗುರಿ ಮತ್ತು ದಾರಿ ತಪ್ಪಿರುವ ಬಗ್ಗೆ ಪ್ರಸ್ತಾಪ ಮಾಡುವುದಲ್ಲ.
ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸರ ಮೇಲೆ ಅನುಮಾನಪಡುವಂತಹ ಎರಡು ಘಟನೆಗಳು ಈ ಹಿಂದೆ ನಡೆದಿದ್ದವು. ಅವುಗಳನ್ನು ನಕ್ಸಲೀಯರ ತಲೆಗೆ ಕಟ್ಟಿ ಕೈ ತೊಳೆದುಕೊಂಡ ಪೊಲೀಸರು, ಇದೀಗ ರಾತ್ರಿ ವೇಳೆಯಲ್ಲಿ ದನ ಸಾಗಾಣಿಕೆ ಮಾಡುತ್ತಿದ್ದ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿ ಓರ್ವರನ್ನು ಹತ್ಯೆ ಮಾಡಿದ್ದಾರೆ. ಇದು, ಎಎನ್‌ಎಫ್ ಮನಸ್ಥಿತಿ ಪ್ರಶ್ನೆ ಮಾಡುವಂತಿದೆ.
ಮೊದಲ ಪ್ರಕರಣ: ಪಶ್ಚಿಮಘಟ್ಟ ಪ್ರದೇಶದಲ್ಲಿ ಮೊಟ್ಟ ಮೊದಲ ಬಾರಿಗೆ 2002ರಲ್ಲಿ ನಕ್ಸಲೀಯರು ಇರುವಿಕೆ ದೃಢಪಟ್ಟಿತು. 2003ರಲ್ಲಿ ನಕ್ಸಲೀಯರು ಈದುವಿನಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ಗೆ ಬಲಿಯಾದರು. ಅಂದಿನಿಂದ ಪಶ್ಚಿಮಘಟ್ಟದಲ್ಲಿ ಪೊಲೀಸರ ಹಾಗೂ ನಕ್ಸಲೀಯರ ನಡುವೆ ಗುಂಡಿನ ಚಕಮಕಿ, ಎನ್‌ಕೌಂಟರ್, ನಕ್ಸಲೀಯರಿಂದ ಸಾರ್ವಜನಿಕ, ಸರ್ಕಾರಿ ಆಸ್ತಿ ಹಾನಿ, ಅಮಾಯಕರ ಹತ್ಯೆ ಈ ರೀತಿಯ ಪ್ರಕರಣಗಳು ಸರ್ಕಾರದಷ್ಟೇ ಅಲ್ಲ, ಮಲೆನಾಡಿನ ಜನರ ಬದುಕಿನ ಮೇಲೆ ದುಷ್ಪರಿಣಾಮ ಬೀರಿತ್ತು.
ಕರ್ತವ್ಯಲೋಪ: ನಕ್ಸಲೀಯರನ್ನು ದಮನ ಮಾಡಲು ಮಲೆನಾಡಿನಲ್ಲಿ ನಕ್ಸಲ್ ನಿಗ್ರಹ ಪಡೆಯ ತಂಡಗಳ ಕ್ಯಾಂಪ್‌ಗಳನ್ನು ಸ್ಥಾಪಿಸಲಾಯಿತು. ಮಲೆನಾಡಿನಲ್ಲಿ ನಕ್ಸಲೀಯರು ಕಂಡು ಬಂದಂತೆ ತಕ್ಷಣವೇ ಅವರ ಮೇಲೆ ದಾಳಿ ನಡೆಸಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಸರ್ಕಾರ ಈ ಕ್ರಮ ತೆಗೆದುಕೊಂಡಿತು. ಇದರಿಂದಾಗಿ ನಕ್ಸಲೀಯರ ಓಡಾಟ ಕಡಿಮೆಯಾಗಿದೆ ಎಂಬುದನ್ನು ಯಾರೂ ಕೂಡ ಅಲ್ಲಗೆಳೆಯುವುದಿಲ್ಲ. ಆದರೆ, ಕಾರ್ಯಾಚರಣೆಯ ಪೊಲೀಸರು ಕೆಲವು ಸಂದರ್ಭದಲ್ಲಿ ಕರ್ತವ್ಯಲೋಪ ಎಸಗಿದ್ದಾರೆ. ತನಿಕೋಡು ಅರಣ್ಯ ಚೆಕ್ ಪೋಸ್ಟ್‌ನಲ್ಲಿ ನಡೆದಿರುವ ಹತ್ಯೆಯೂ ಇದರಲ್ಲಿ ಒಂದಾಗಿದೆ ಎಂದರೆ ತಪ್ಪಾಗಲಾರದು.
ಹತ್ಯೆ- 1: ಮೂಡಿಗೆರೆ ತಾಲೂಕಿನ ಮಾವಿನಹೊಲದಲ್ಲಿ 2008ರ ನವೆಂಬರ್ 18ರಂದು ನಕ್ಸಲೀಯರು- ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಮೂವರು ನಕ್ಸಲೀಯರು ಹಾಗೂ ಓರ್ವ ಎಎನ್‌ಎಫ್ ಪೇದೆ ಮೃತಪಟ್ಟರು.
ಮೃತಪಟ್ಟ ಪೇದೆ ಕೊಡಗಿನ ಗುರುಪ್ರಸಾದ್. ಪಶ್ಚಿಮಘಟ್ಟದಲ್ಲಿ ನಕ್ಸಲೀಯರ ವಿರುದ್ಧದ ಕಾರ್ಯಾಚರಣೆಯಲ್ಲಿ ಪೇದೆಯೋರ್ವ ಮೃತಪಟ್ಟ ಪ್ರಕರಣ ಇದಾಗಿದೆ. ನಕ್ಸಲೀಯರು ನಡೆಸಿದ ಗುಂಡಿನ ದಾಳಿಯಲ್ಲಿ ಗುರುಪ್ರಸಾದ್ ಮೃತಪಟ್ಟರೆಂದು ಪೊಲೀಸರು ಹೇಳಿ ಅದನ್ನು ನಕ್ಸಲೀಯರ ತಲೆಗೆ ಕಟ್ಟಿದರು. ಆದರೆ, ಗುರುಪ್ರಸಾದ್ ಮೃತಪಟ್ಟ ಸ್ಥಳ ಹಾಗೂ ಗಾಯಗೊಂಡಿರುವ ದೇಹದ ಸ್ಥಿತಿ ನೋಡಿದರೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದವು.
ಹತ್ಯೆ- 2: 2004ರ ಜುಲೈ 20ರಂದು ನಕ್ಸಲೀಯರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಲ್ಲೂರು ಅಂಗಡಿ ಗ್ರಾಮದ ಸುತ್ತಮುತ್ತ ಓಡಾಡುತ್ತಿದ್ದಾರೆಂಬ ಸುಳಿವು ಸಿಕ್ಕಿತು.
ಈ ವಿಷಯ ತಿಳಿಯುತ್ತಿದ್ದಂತೆ ಎಎಸ್‌ಐ ವೆಂಕಟೇಶ್ ಅವರು ಸ್ಥಳಕ್ಕೆ ತೆರಳಿದರು. ಈ ವಿಷಯ ತಡವಾಗಿ ತಿಳಿದ ಎಎನ್‌ಎಫ್ ಸಿಬ್ಬಂದಿ ಸ್ಥಳಕ್ಕೆ ತೆರಳಿದರು. ಆಗ ಸಂಜೆಯ ಸಮಯವಾಗಿದ್ದರಿಂದ ದೂರದಲ್ಲಿದ್ದವರು ಅಸ್ಪಷ್ಟವಾಗಿ ಕಾಣುತ್ತಿದ್ದರು. ಎಎನ್‌ಎಫ್ ಸಿಬ್ಬಂದಿ ತೆರಳಿದ ಕೆಲವೇ ಸಮಯದಲ್ಲಿ ಅಘಾತಕಾರಿ ವಿಷಯ ಬೆಳಕಿಗೆ ಬಂದಿತು.
ನಕ್ಸಲೀಯರು ಗುಂಡಿನ ದಾಳಿ ನಡೆಸಿದ್ದರಿಂದ ಎಎಸ್‌ಐ ವೆಂಕಟೇಶ್ ಅವರು ಸ್ಥಳದಲ್ಲೇ ಮೃತಪಟ್ಟರೆಂದು ಹೇಳಲಾಯಿತು. ಈ ಹತ್ಯೆ ನಿಜವಾಗಿಯೂ ನಕ್ಸಲೀಯರಿಂದ ನಡೆಯಿತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಅಷ್ಟೇ ಅಲ್ಲ, ಪೊಲೀಸ್ ಇಲಾಖೆಯ ವಲಯದಲ್ಲೂ ಚರ್ಚೆಗೆ ಆಸ್ಪದ ನೀಡಿತ್ತು. ಕೊನೆಯಲ್ಲಿ ಈ ಹತ್ಯೆಯನ್ನು ನಕ್ಸಲೀಯರ ತಲೆಗೆ ಕಟ್ಟಲಾಯಿತು.
ಹತ್ಯೆ- 3: ಶೃಂಗೇರಿ ತಾಲೂಕು ನಕ್ಸಲ್‌ಪೀಡಿತ ಪ್ರದೇಶ. ಇಲ್ಲಿನ ತನಿಕೋಡು ಪ್ರದೇಶದಲ್ಲಿ ನಕ್ಸಲೀಯರು ಓಡಾಡುತ್ತಿದ್ದರಿಂದ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸುತ್ತಿದೆ. ಶುಕ್ರವಾರ ರಾತ್ರಿ ತೀರ್ಥಹಳ್ಳಿಯಿಂದ ಶೃಂಗೇರಿ ಮಾರ್ಗವಾಗಿ ಮಂಗಳೂರಿಗೆ ದನಗಳನ್ನು ಸಾಗಾಣಿಕೆ ಮಾಡುತ್ತಿದ್ದ ತಂಡ ತಪಾಸಣಾ ಕೇಂದ್ರದಲ್ಲಿ ಪೊಲೀಸರು ಕಂಡು ಓಡಿದ್ದು, ಇದರಿಂದ ಅನುಮಾನಗೊಂಡ ಪೊಲೀಸರು ಅವರ ಮೇಲೆ ಗುಂಡಿನ ದಾಳಿ ನಡೆಸಿದೆ. ಇದರಿಂದಾಗಿ ಒಬ್ಬ ಮೃತಪಟ್ಟಿದ್ದಾನೆ.
ಪೊಲೀಸರನ್ನು ನೋಡಿ ಓಡಿದವರು ಮೂವರು, ಅವರನ್ನು ಬೆನ್ನಟ್ಟಿದ ಎಎನ್‌ಎಫ್ ತಂಡದಲ್ಲಿದ್ದವರು ಆರು ಮಂದಿ. ಎದುರಾಳಿಗಳು ದಾಳಿ ನಡೆಸುವ ವೇಳೆಯಲ್ಲಿ ಆತ್ಮರಕ್ಷಣೆ ಮಾಡಿಕೊಳ್ಳಲು ಗುಂಡು ಹಾರಿಸುವುದು ತಪ್ಪೇನೂ ಇಲ್ಲ. ಪೊಲೀಸರನ್ನು ಹೆದರಿ ಓಡುವವರ ಮೇಲೆಲ್ಲಾ ಗುಂಡು ಹಾರಿಸುತ್ತಾ ಹೋದರೆ ಸಾಯುವವರ ಸಂಖ್ಯೆ ಲೆಕ್ಕವೇ ಇರುವುದಿಲ್ಲ. ಸಾರ್ವಜನಿಕರನ್ನು ಬಂದೂಕಿನಿಂದ ಮಾತನಾಡಿಸುತ್ತಾ ಹೋದರೆ ಕಾನೂನು ಸುವ್ಯವಸ್ಥೆಗೆ ಅರ್ಥವೇ ಇರುವುದಿಲ್ಲ. ನಕ್ಸಲೀಯರ ಕಾರ್ಯಾಚರಣೆಯಲ್ಲಿರುವ ಪೊಲೀಸರ ಮನಸ್ಥಿತಿಯನ್ನು ಇಲಾಖೆಯವರು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿ.
ಆರ್. ತಾರಾನಾಥ್