ಶೂಟೌಟ್ ಪ್ರಕರಣಕ್ಕೆ ಖಂಡನೆ
ಚಿಕ್ಕಮಗಳೂರು: ಶೃಂಗೇರಿಯ ತನಿಕೋಡು ಚೆಕ್‌ಪೋಸ್ಟ್‌ನಲ್ಲಿ ಜೋಕಟ್ಟೆ ವಾಸಿ ಕಬೀರ್ ಎಂಬಾತನನ್ನು ಎಎನ್‌ಎಫ್ ಪೊಲೀಸ್ ಪೇದೆ ಏಕಾಏಕಿ ಗುಂಡು ಹಾರಿಸಿ ಹತ್ಯೆಗೈದಿರುವುದನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಾಗೂ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಖಂಡಿಸಿದೆ.
ಜೋಕಟ್ಟೆ ನಿವಾಸಿಗಳಾದ ಕಬೀರ್, ರಫೀಕ್, ಶೇಖಬ್ಬ, ಸರ್ಫ್ ರಾಜ್, ಪ್ರಮೋದ್ ಅವರು ಮಂಗಳೂರಿನ ನೋಂದಣಿ ಸಂಖ್ಯೆಯ ವಾಹನದಲ್ಲಿ ಜಾನುವಾರು ಸಾಗಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಫೀಕ್ ಹೇಳಿಕೆಯ ಪ್ರಕಾರ ಜಾನುವಾರುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತೆಗೆದುಕೊಂಡು ತನಿಖಾ ಠಾಣೆಗೆ ಹೋದಾಗ ಏಕಾಏಕಿ ಕಬೀರ್ ಮೇಲೆ ಎಎನ್‌ಎಫ್ ತಂಡದ ಸಿಬ್ಬಂದಿ ಗುಂಡು ಹಾರಿಸಿ ಕೊಲೆಗೈದಿರುವುದನ್ನು ಕಣ್ಣಾರೆ ಕಂಡ ಉಳಿದವರು ಪ್ರಾಣಭಯದಿಂದ ಓಡಿ ಪಾರಾಗಿದ್ದಾರೆ. ಅವರಲ್ಲಿ ಒಬ್ಬನನ್ನು ಬಂಧಿಸಿದ್ದಾರೆ. ಜಾನುವಾರು ಸಾಗಾಣಿಕೆ ಮಾಡುತ್ತಿರುವುದು ಕಾನೂನು ಬಾಹಿರವಾಗಿದ್ದಲ್ಲಿ ಅವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು ಒಬ್ಬ ಯುವಕನನ್ನು ಪ್ರಾಣಿಗಿಂತಲೂ ಕಡೆಯಾಗಿ ಹೊಡೆದು ಸಾಯಿಸಿದ ಎಎನ್‌ಎಫ್ ಪೇದೆಗಳನ್ನು ಈ ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿಯುದ್ದೀನ್ ಹಾಗೂ ಫಿಎಫ್‌ಐನ ಜಿಲ್ಲಾ ಅಧ್ಯಕ್ಷ ಫಾರುಕ್ ಪ್ರತ್ಯೇಕ ಹೇಳಿಕೆಗಳಲ್ಲಿ ಆಗ್ರಹಿಸಿದ್ದಾರೆ.
ಕೊಲೆಯಾದ ವ್ಯಕ್ತಿಯ ದುಃಖತಪ್ತ ಕುಟುಂಬದವರು ಮೃತದೇಹವನ್ನು ಕೊಂಡೊಯ್ಯಲು ಬಂದಂತಹ ಸಂದರ್ಭದಲ್ಲಿ ಅವರ ಮೇಲೆ ಏಕಾಏಕಿ ಹಲ್ಲೆ ಮಾಡಿ ಅವರ ವಾಹನವನ್ನು ಜಖಂಗೊಳಿಸಿರುವುದು ನೋಡಿದರೆ ಇದೊಂದು ವ್ಯವಸ್ಥಿತ ರಾಜಕೀಯ ಷಡ್ಯಂತ್ರ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಮೂಲಕ ಸತ್ಯಾಂಶವನ್ನು ಬಯಲುಗೊಳಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತವಾದ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.