ನೀರು ಪಾಲಾಗಿದ್ದ ಇಬ್ಬರ ಮೃತದೇಹ ಪತ್ತೆ
ನರಸಿಂಹರಾಜಪುರ: ಭಾನುವಾರ ಸಂಜೆ ಕೂಸುಗಲ್ಲು ಸಮೀಪದ ಭದ್ರಾ ನದಿಗೆ ಸ್ನಾನಕ್ಕೆ ಹೋಗಿ ನೀರಿನಲ್ಲಿ ಮುಳುಗಿದ್ದ ಇಬ್ಬರು ಯುವಕರ ಮೃತದೇಹವು ಸೋಮವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಪತ್ತೆಯಾಗಿದೆ.
ಮೃತ ಯುವಕರನ್ನು ಬಾಳೆಕೊಪ್ಪ ಗ್ರಾಮದ ಜೇಮ್ಸ್(25) ಹಾಗೂ ಬಡಗಬೈಲು ಗ್ರಾಮದ ಹಿರೇಬಿಸು ಅನಿಲ(27) ಎಂದು ಗುರುತಿಸಲಾಗಿದೆ. ಜೇಮ್ಸ್, ಅನಿಲ್ ಸೇರಿ 6 ಮಿತ್ರರು ಭಾನುವಾರ ಸಂಜೆ 4 ಗಂಟೆಯ ಸುಮಾರಿಗೆ ಕೂಸುಗಲ್ಲು ಸಮೀಪದ ಭದ್ರಾ ನದಿಗೆ ಸ್ನಾನಕ್ಕೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ನೀರಿನ ಸುಳಿಗೆ ಸಿಕ್ಕಿ ಜೇಮ್ಸ್ ಮತ್ತು ಅನಿಲ್ ಮುಳುಗಿದ್ದಾರೆ. ತಕ್ಷಣ ಮಿತ್ರರಾದ ಸುವಿಲ್ ಎಂಬ ಯುವಕನು ತಕ್ಷಣ ಅವರನ್ನು ನೀರಿನಿಂದ ಎತ್ತಲು ಪ್ರಯತ್ನಪಟ್ಟರೂ ವಿಫಲವಾಗಿದೆ. ಸುವಿಲ್ ಸಹ ನೀರಿನ ಸೆಳೆತಕ್ಕೆ ಸಿಕ್ಕಿದ್ದು, ತಕ್ಷಣ ಬಂಡೆಯ ಸಹಾಯದಿಂದ ನೀರಿನಿಂದ ಮೇಲೆ ಬಂದಿದ್ದಾನೆ. ಮೃತದೇಹವನ್ನು ಸಂಜೆಯವರೆಗೂ ಹುಡುಕಿದರೂ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಗ್ಗೆ ಪೊಲೀಸರು ಭದ್ರಾವತಿಯಿಂದ ಮೀನುಗಾರರನ್ನು ಕರೆಸಿ ಶೋಧ ಮಾಡಿಸಿದರು.
ಸೋಮವಾರ ಬೆಳಗ್ಗೆ 10.30 ಗಂಟೆಗೆ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಅಗ್ನಶ್ಯಾಮಕ ದಳ ಆಗಮಿಸಿತ್ತು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಯುವಕ ನೀರು ಪಾಲು
ನರಸಿಂಹರಾಜಪುರ: ತಾಲೂಕಿನ ಮಾರಿದಿಬ್ಬ ಸಮೀಪದ ಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ರೋಹನ್ (26) ಎಂಬ ಯುವಕ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಭದ್ರಾವತಿ ತಾಲೂಕಿನ ಮಾಚೇನಹಳ್ಳಿಯಲ್ಲಿದ್ದ ಕೆಎಸ್ಆರ್ಪಿ ತುಕಡಿಗೆ ಸೇರಿದ್ದ ಅಸಿಸ್ಟೆಂಟ್ ಸಬ್ ಇನ್ಸಪೆಕ್ಟರ್ ರಮೇಶ್ ಎಂಬುವರ ಮಗ ರೋಹನ್ ಹಾಗೂ ಅದೇ ತುಕುಡಿಗೆ ಸೇರಿದ 9 ಯುವಕರು ಪಿಕ್ನಿಕ್ ಎಂದು ತಾಲೂಕಿನ ಮಾರಿದಿಬ್ಬ ಸಮೀಪದ ಭದ್ರಾ ನದಿಗೆ ಶನಿವಾರ ಮಧ್ಯಾಹ್ನ ಬಂದಿದ್ದರು. ಆದರೆ, ಸ್ನಾನ ಮಾಡುವಾಗ ನೀರಿನ ಸೆಳೆತಕ್ಕೆ ರೋಹನ್ ಕೊಚ್ಚಿ ಹೋಗಿದ್ದಾನೆ. ಭಾನುವಾರ ಬೆಳಿಗ್ಗೆ ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರ ತೆಗೆಯಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಸು- ಕರು ಕಳವು
ಮೂಡಿಗೆರೆ: ತಾಲೂಕಿನ ಬಡವನದಿಣ್ಣೆಯಲ್ಲಿ ಕಳ್ಳರ ಗುಂಪೊಂದು ಹಸು-ಕರುಗಳನ್ನು ಕಳವು ಮಾಡಿರುವ ಪ್ರಕರಣ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಡವನ ದಿಣ್ಣೆಯ ಪಿ.ಕೆ. ನಾಗೇಶ್ಗೌಡರ ಕೊಟ್ಟಿಗೆಯಲ್ಲಿದ್ದ 2 ಹಸುಗಳು ಮತ್ತು ಒಂದು ಕರು ಹಾಗೂ ರವಿ ಎಂಬುವವರಿಗೆ ಸೇರಿದ 2 ಹಸುಗಳನ್ನು ಕೊಟ್ಟಿಗೆಯಿಂದ ಕಳವು ಮಾಡಲಾಗಿದೆ. ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಠಾಣಾಧಿಕಾರಿ ಹಾಲಪ್ಪ ಪ್ರಕರಣ ದಾಖಲಿಸಿ ಕಳುವಾಗಿರುವ ದನಕರುಗಳ ಶೋಧಕಾರ್ಯದಲ್ಲಿ ತೊಡಗಿದ್ದಾರೆ.
ವ್ಯಕ್ತಿ ಸಾವು
ಚಿಕ್ಕಮಗಳೂರು: ಚಲಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಾಯವಾದ ಘಟನೆ ತಾಲೂಕಿನ ಹಿರೇಗೌಜ ಬಳಿ ಶನಿವಾರ ರಾತ್ರಿ ನಡೆದಿದೆ. ಅಶ್ವಿನ್ ಕುಮಾರ್ ಸ್ಥಳದಲ್ಲೇ ಮೃತಪಟ್ಟವರು. ಕಾರಿನಲ್ಲಿ ಕುಳಿತಿದ್ದ ಭಾನು ಶಶಿಕಿರಣ, ಇನ್ ಫಾಂಟ್ ಪ್ರತೀಕ್ ಹಾಗೂ ಟೆರೆನ್ಸ್ ವಾಸು ಎಂಬುವವರಿಗೆ ಗಾಯಗಳಾಗಿವೆ. ಶಿವಮೊಗ್ಗದ ಶರಾವತಿ ನಗರದ ಅಶ್ವಿನ್ ಕುಮಾರ್ ಹಾಗೂ ಭಾನು ಶಶಿಕಿರಣ, ಇನ್ ಫಾಂಟ್ ಪ್ರತೀಕ್ ಹಾಗೂ ಟೆರೆನ್ಸ್ ವಾಸು ಕೆ.ಎಂ. ರಸ್ತೆಯ ಮಾರ್ಗವಾಗಿ ಧರ್ಮಸ್ಥಳಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಹಿರೇಗೌಜ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಮರಕ್ಕೆ ಡಿಕ್ಕಿ ಹೊಡೆದಿದೆ. ಸಖರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.