ಮಾದಕ ವಸ್ತು ಮಾರಾಟ ದಂಧೆ ತಡೆಯದಿದ್ದರೆ ಹೋರಾಟ: ಎಚ್ಚರಿಕೆ
ಕ.ಪ್ರ.ವಾರ್ತೆ ಮೂಡಿಗೆರೆ ಏ. 21
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಗಾಂಜಾ ಮತ್ತು ಅಫೀಮು ದಂಧೆ ಅಧಿಕವಾಗಿದ್ದು, ಕಾಲೇಜು ಸೇರಿದಂತೆ ಹೈಸ್ಕೂಲ್ ವಿದ್ಯಾರ್ಥಿಗಳು ಈ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದು, ಮಾರಾಟದ ಬಗ್ಗೆ ಸಾರ್ವಜನಿಕರು ಖಚಿತ ಮಾಹಿತಿ ನೀಡಿದರೂ ಪೊಲೀಸರು ಕ್ರಮ ಜರುಗಿಸಿಲ್ಲ ಎಂದು ಕರವೇ ಘಟಕದ ಅಧ್ಯಕ್ಷ ದಾರದಹಳ್ಳಿ ಪ್ರಸನ್ನ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇಗಲಪೇಟೆ, ಬಿಳಗುಳ ಶಾಲೆಯ ಸಮೀಪ, ಮಾಕೋನಹಳ್ಳಿ ರಸ್ತೆ, ಹ್ಯಾಂಡ್‌ಪೋಸ್ಟ್ ಮಾವಿನ ಮರದ ಸಮೀಪ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಾದಕ ವಸ್ತುಗಳು ಮಾರಾಟವಾಗುತ್ತಿದ್ದು, ಈ ಮಾದಕ ವಸ್ತುಗಳು ಬೇಲೂರಿನಿಂದ ಸರಬರಾಜಾಗುತ್ತಿದೆ ಎಂದು ಖಚಿತ ಮಾಹಿತಿ ದೊರೆತರೂ ಪೊಲೀಸ್ ಇಲಾಖೆಯವರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದರು.
ಗೌರವಾಧ್ಯಕ್ಷ ಹೊರಟ್ಟಿ ರಘು ಮಾತನಾಡಿ, ಗಾಂಜಾ, ಅಫೀಮು ಸೇವನೆಯಿಂದ ವಿದ್ಯಾರ್ಥಿಗಳು ದುರ್ಬಲರಾಗುತ್ತಿದ್ದು, ಸಿಗರೇಟಿ ನಲ್ಲಿ ಸೇರಿಸಿ ಸೇವನೆಯಲ್ಲಿ ತೊಡಗಿದ್ದು, ದೇಶದಶಕ್ತಿಯಾಗುವ ಬದಲು, ದೇಶಕ್ಕೆ ಮಾರಕರಾಗಿ ಬದಲಾಗುತ್ತಿದ್ದಾರೆ. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಕೆಲವರು ದಂಧೆಕೋರರೊಂದಿಗೆ ಶಾಮೀಲಾಗಿದ್ದು, ಯಾವ ಅಡೆತಡೆ ಇಲ್ಲದೇ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಒಂದು ವಾರದೊಳಗೆ ಗಾಂಜಾ, ಅಫೀಮು ಮಾರಾಟಗಾರರನ್ನು ಬಂಧಿಸದೆ ಇದ್ದಲ್ಲಿ ಇತರೆ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿ ರುವುದಾಗಿ ತಿಳಿಸಿದ್ದಾರೆ.