ಯುವ ಪೀಳಿಗೆ ದೇಸೀ ಸಂಸ್ಕೃತಿ, ಕೃಷಿ ಉಳಿವಿಗೆ ಚಿಂತಿಸಲಿ
ಚಿಕ್ಕಮಗಳೂರು: ಈಗಿನ ಯುವಪೀಳಿಗೆ ದೇಶೀಯ ಸಂಸ್ಕೃತಿ ಮತ್ತು ಕೃಷಿ ಉಳಿವಿಗಾಗಿ ಮುಂದೆ ಬರಬೇಕೆಂದು ಹೊರನಾಡಿನ ಶ್ರೀ ಕ್ಷೇತ್ರದ ಧರ್ಮಕರ್ತ ಡಾ. ಭೀಮೇಶ್ವರ ಜೋಷಿ ಕರೆ ನೀಡಿದ್ದಾರೆ.
ನಗರದ ಎಐಟಿ ಕಾಲೇಜಿನ ಹೊರಾಂಗಣ ಸಭಾಂಗಣದಲ್ಲಿ ತೀರ್ಥಹಳ್ಳಿಯ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ ಸೋಮವಾರ ಏರ್ಪಡಿಸಿದ್ದ ಪುರುಷೋತ್ತಮ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಶಿರಸಿ ತಾಲೂಕಿನ ದೇವನಹಳ್ಳಿಯ ವಿಮಲಾ, ಗೋಪಾಲಕೃಷ್ಣ ವೆಂಕಟರಮಣ ಹೆಗಡೆ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯಾದರೆ ಸಾಲದು, ವಿಕಾಸವಾಗಬೇಕು ಎಂದು ಹೇಳಿದರು.
ಭೀಕರ ಸನ್ನಿವೇಶ: ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮ ಯುವ ಪೀಳಿಗೆಯ ಮೇಲೆ ಪರಿಣಾಮ ಬೀರಿದೆ. ಆದುದರಿಂದಾಗಿ ನಗರ, ಪಟ್ಟಣಗಳು ಸೇರಿದಂತೆ ಗ್ರಾಮೀಣ ಭಾಗದ ಯುವಕರು ಸಹ ಇದಕ್ಕೆ ಮಾರು ಹೋಗಿದ್ದಾರೆ. ಇದೊಂದು ಅಪಾಯಕಾರಿ ಬೆಳವಣಿಗೆ. ನಮ್ಮ ದೇಶದ ಸಂಸ್ಕೃತಿ ಜತೆಗೆ ಕೃಷಿ ಪದ್ಧತಿಯನ್ನು ಉಳಿಸುವ ಕೆಲಸ ಆಗಬೇಕು. ಇಲ್ಲದೆ ಹೋದರೆ ಮುಂದೊಂದು ದಿನ ಆಹಾರ ಕೊರತೆಯಂತಹ ಭೀಕರ ಸನ್ನಿವೇಶ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಕೃಷಿ ಪ್ರಧಾನ ಭಾರತ ದೇಶದಲ್ಲಿ ಇನ್ನಷ್ಟು ಕೃಷಿ ಕ್ಷೇತ್ರ ಪ್ರಗತಿ ಸಾಧಿಸಬೇಕು. ಸಾವಯವ ಕೃಷಿಗೆ ಸರ್ಕಾರಗಳು ಹೆಚ್ಚಿನ ಒತ್ತು ನೀಡಿ ಹಸಿರು ಕ್ರಾಂತಿ ಮಾಡುವಲ್ಲಿ ಮುಂದಾಗಬೇಕು ಎಂದು ತಿಳಿಸಿದರು.
ಹೆಮ್ಮೆಯ ವಿಷಯ: ಪುರುಷೋತ್ತಮರಾಯರ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿ ಅತ್ಯಂತ ಅರ್ಥಪೂರ್ಣವಾಗಿದ್ದು, ಯಾವುದೇ ಶಿಫಾರಸಿಗೆ ಒಳಗಾಗದೆ ಉತ್ತಮ ಸಾಧಕರನ್ನು ಗುರುತಿಸಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ. 4 ವರ್ಷಕ್ಕೊಮ್ಮೆ ಹೊರರಾಜ್ಯದ ಕೃಷಿಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.
ವಿಷಾದನೀಯ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಸಹ ವ್ಯವಸ್ಥಾ ಪ್ರಮುಖರಾದ ಮಂಗೇಶ್ ಭೇಂಡೆ ಸಾಧಕ- ಸಾಧನೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಇಂದಿನ ಯುವಕರು ದೇಶದ ಭವಿಷ್ಯದ ಬಗ್ಗೆ ಯೋಚಿಸಬೇಕು. ದೇಶದಲ್ಲಿ ಕೃಷಿಗೆ ಆದ್ಯತೆ ಕಡಿಮೆಯಾಗಿ ರಿಯಲ್ ಎಸ್ಟೇಟ್ ಹೆಸರಿನಲ್ಲಿ ಜಮೀನು ಮಾರುತ್ತಿರುವುದು ಬಹಳ ವಿಷಾದನೀಯ ಸಂಗತಿ ಎಂದು ಹೇಳಿದರು.
ದೇಶದಲ್ಲಿ ಭ್ರಷ್ಟಾಚಾರ ಮಾಡುತ್ತಿರುವುದು ವಿದ್ಯಾವಂತರೇ ಹೊರತು ಅಶಿಕ್ಷಿತರಲ್ಲ. ಮಾನವೀಯ ಮೌಲ್ಯಗಳನ್ನು ಬುದ್ಧಿವಂತರು ಕಳೆದುಕೊಳ್ಳುತ್ತಿದ್ದಾರೆ. ಭೂಮಿಯನ್ನು ನಂಬಿ ಸಾಧನೆ ಮಾಡಿದವರು ಅತ್ಯಂತ ಶ್ರೇಷ್ಠರಾಗಿದ್ದಾರೆ.
ನಮ್ಮ ಪೂರ್ವಜರು ಮುಂದಿನ ಜಗತ್ತಿಗೆ ಅಗತ್ಯವಿರುವುದನ್ನು ಯೋಚಿಸಿ ನಮಗೆ ಮಾದರಿಯಾಗಿದ್ದರು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಕೊಡುಗೆ ಏನೆಂಬುದನ್ನು ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕು ಎಂದರು.
ಪುರುಷೋತ್ತಮ ಪ್ರಶಸ್ತಿ ಪುರಸ್ಕೃತರಾದ ವಿಮಲಾ, ಗೋಪಾಲಕೃಷ್ಣ ವೆಂಕಟರಮಣ ಹೆಗಡೆ ಮಾತನಾಡಿ, ಯಾವುದೇ ಪ್ರಶಸ್ತಿಯ ಹಿಂದೆ ಹೋಗದೆ ಅತ್ಯಂತ ಚಿಕ್ಕದಾಗಿ ಸಾವಯವ ಕೃಷಿಯನ್ನು ಹೊಂದಿ ನಮ್ಮ ಬದುಕಿನ ವಿಶೇಷತೆಯನ್ನು ಕಂಡಿದ್ದೆವು. ಭೂಮಿ, ಗಾಳಿ, ನೀರನ್ನು ಯಾರೂ ನಿರ್ಲಕ್ಷಿಸದೆ ಅತ್ಯಂತ ಜಾಗೃತಿಯಿಂದ ಬಳಸಿ ಉಳಿಸುವ ಅಗತ್ಯ ಎಲ್ಲರಿಗಿದೆ ಎಂದರು.
ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ರಾಜಗೋಪಾಲ್, ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದ ಸುಬ್ಬರಾವ್, ತೀರ್ಥಹಳ್ಳಿಯ ಮಾಜಿ ಶಾಸಕ ಆರಗ ಜ್ಞಾನೇಂದ್ರ, ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ರಾಯ, ಶಾಸಕ ಸಿ.ಟಿ. ರವಿ, ಡಾ. ಆನಂದ್ ಉಪಸ್ಥಿತರಿದ್ದರು.
ಮೂಡಿಗೆರೆಯ ಸುರೇಶಚಂದ್ರ ದತ್ತ ಅವರು ಕೃಷಿಯಲ್ಲಿ ಪರಾಗಸ್ಪರ್ಶಿಗಳ ಮಹತ್ವ ಮತ್ತು ಮೈಸೂರಿನ ಸಾವಯವ ಕೃಷಿಕರಾದ ಚಂದ್ರಶೇಖರ ಅವರು ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ರೇಖಾ ಪ್ರೇಂಕುಮಾರ್ ಪ್ರಾರ್ಥಿಸಿ, ಐ.ಎನ್. ಬಸವೇಗೌಡ ಸ್ವಾಗತಿಸಿದರು, ಚಂದ್ರಶೇಖರ್ ನಾರಾಯಣಪುರ ಕಾರ್ಯಕ್ರಮ ನಿರೂಪಿಸಿದರು, ಅರುಣ್ ಕುಮಾರ್ ವಂದಿಸಿದರು.