ಸಿಬಿಐ ತನಿಖೆಗೆ ವಹಿಸಲು ಆಗ್ರಹ
ಮೂಡಿಗೆರೆ: ಇಲ್ಲಿಗೆ ಸಮೀಪದ ತನಿಕೋಡು ಅರಣ್ಯ ತಪಾಸಣಾ ಠಾಣೆ ಬಳಿ ಅಮಾಯಕ ಯುವಕರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟ ಸೋಮವಾರ ತಹಸೀಲ್ದಾರ್ ಎನ್.ಕೆ.ಶಾರದಾಂಬ ಅವರ ಮೂಲಕ ರಾಜ್ಯಪಾಲರಿಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿತು.
ರು. 50 ಲಕ್ಷ ಪರಿಹಾರ ನೀಡಿ: ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ತಪ್ಪಿತಸ್ಥ ನಕ್ಸಲ್ ನಿಗ್ರಹ ಪಡೆಯವರನ್ನು ಕೆಲಸದಿಂದ ವಜಾಗೊಳಿಸಿ ಅವರನ್ನು ಬಂಧಿಸಬೇಕು. ಹಾಗೂ ಮೃತನ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು. ಕುಟುಂಬಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಸಿ.ಕೆ.ಇಬ್ರಾಹಿಂ, ಅಕ್ರಮ್ ಹಾಜಿ, ಕಿರುಗುಂದ ಅಬ್ಬಾಸ್, ಮೊಹಿಯುದ್ದೀನ್ ಸೇಠ್, ಅಹಮದ್ ಬಾವ, ಗೌಸ್ ಮೊಹಿಯುದ್ದೀನ್, ಹಸನಬ್ಬ, ಅಬ್ದುಲ್ ರಝಾಕ್, ಉಮ್ಮರ್ ಬಣಕಲ್, ಅಬ್ದುಲ್ ಖಾದರ್, ಉಮ್ಮರ್ ಹಂಡುಗುಳಿ, ಇಸ್ಮಾಯಿಲ್, ಕರೀಮ್ ಅಣಜೂರು, ಸುಲೈಮಾನ್ ಮತ್ತಿತರರು ಇದ್ದರು.