ಕುಡಿವ ನೀರು ಸಮಸ್ಯೆ ಬಗೆಹರಿಸಲು ಆದ್ಯತೆ
ನರಸಿಂಹರಾಜಪುರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಹೊಂದಿರುವುವರು ತಮ್ಮ ನಿವೇಶನದಲ್ಲಿರುವ ಪೊದೆ, ಗಿಡ ತೆಗೆದು ಬೇಲಿ ಹಾಕಿಸಿ ಪಟ್ಟಣದ ಸ್ವಚ್ಛತೆಗೆ ಸಹಕಾರ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷೆ ಲೇಖಾ ವಸಂತ್ ಮತ್ತು ಉಪಾಧ್ಯಕ್ಷ ಸುಬಾನ್ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಬಿಡುವುದರಿಂದ ಅಕ್ಕ- ಪಕ್ಕದ ಮನೆಯವರು ಕಸ ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಖಾಲಿ ನಿವೇಶನಕ್ಕೆ ಹಾಕುತ್ತಾರೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ.
ಜತೆಗೆ ಖಾಲಿ ನಿವೇಶನಗಳಲ್ಲಿ ಪೊದೆ, ಗಿಡಗಳು ಬೆಳೆದರೆ ಹಾವುಗಳು ಸೇರಿ ಸುತ್ತಮುತ್ತಲಿನ ಮನೆಯವರಿಗೆ ಅಪಾಯ ಉಂಟಾಗಲಿದೆ. ಈಗಾಗಲೇ ಪಟ್ಟಣ ಪಂಚಾಯಿತಿಗೆ ಸೇರಿದ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ ಬೇಲಿ ಹಾಕಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.
ಪಟ್ಟಣವನ್ನು ಸ್ವಚ್ಛಗೊಳಿಸಿ ಕಸ ಮುಕ್ತ ಪಟ್ಟಣವನ್ನಾಗಿಸುವುದೇ ನಮ್ಮ ಗುರಿಯಾಗಿದೆ ಎಂದರು.
ಪಟ್ಟಣದಲ್ಲಿ 11 ವಾರ್ಡುಗಳಿದ್ದು, 7,460 ಜನಸಂಖ್ಯೆ ಇದೆ. 1,650 ಮನೆಗಳಿವೆ. 11 ವಾಡುರ್ಗಳಿಗೂ ಸೈರನ್ ಹೊಂದಿರುವ ಒಂದು ಟ್ರ್ಯಾಕ್ಟರ್ ಮನೆ, ಮನೆಗಳ ಮುಂದೆ ನಿಲ್ಲಲಿದ್ದು, ಮನೆಗಳಿಗೆ ಈಗಾಗಲೇ ಪಟ್ಟಣ ಪಂಚಾಯಿತಿ ನೀಡಿರುವ ಎರಡು ಬಕೆಟ್ಗಳಲ್ಲಿ ದಾಸ್ತಾನು ಮಾಡಿದ ಕಸ ಹಾಕಬೇಕು. ಇನ್ನೊಂದು ಟ್ರ್ಯಾಕ್ಟರ್ ಮುಖ್ಯ ಬೀದಿ, ಸಂತೆ ಮೈದಾನ ಮುಂತಾದ ಕಸಗಳನ್ನು ಸಂಗ್ರಹಿಸುತ್ತದೆ.
ಅಗತ್ಯವಿರುವ ಕಡೆ ಕಸದ ತೊಟ್ಟಿ ಇಟ್ಟಿದ್ದೇವೆ. ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕುಡಿಯುವ ನೀರಿಗೆ ಆದ್ಯತೆ: ಪಟ್ಟಣದ ಎಲ್ಲರಿಗೂ ಸಮರ್ಪಕ ಕುಡಿಯುವ ನೀರು ಕೊಡಬೇಕು ಎಂದು ಪಟ್ಟಣ ಪಂಚಾಯಿತಿ ತೀರ್ಮಾನಿಸಿದೆ. ಪಟ್ಟಣದಲ್ಲಿ 32 ಬೋರ್ವೆಲ್ಗಳಿವೆ. ಸದ್ಯಕ್ಕೆ ಅಗ್ರಹಾರದ ಭಾಗದಲ್ಲಿ ವಿದ್ಯುತ್ ಹೋದಾಗ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಇದಕ್ಕಾಗಿ ಕಟ್ಟಿರುವ ಹೊಸ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆಯಾದ ಮೇಲೆ ಅಲ್ಲಿನ ಸಮಸ್ಯೆ ಬಗೆಹರಿಯಲಿದೆ.
ಬೀದಿದೀಪದ ಸಮಸ್ಯೆ ಇಲ್ಲವಾಗಿದೆ. ಆದರೆ, ಪಟ್ಟಣದ ವ್ಯಾಪ್ತಿಯಲ್ಲಿ ಕೆಲವು ವರ್ಷದ ಹಿಂದೆ ನಿರ್ಮಿಸಿರುವ ಸೋಲಾರ್ ದೀಪಗಳ ಬ್ಯಾಟರಿ ಹಾಳಾಗಿರುವುದರಿಂದ ಸೋಲಾರ್ ದೀಪ ಕೆಟ್ಟು ಹೋಗಿದ್ದು, ಇದನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಪಟ್ಟಣದ ಮೂಲ ಸೌಲಭ್ಯಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದ್ದಾರೆ.