ಕೆರೆಗೆ ತಡೆಗೋಡೆ ನಿರ್ಮಿಸಲು ಆಗ್ರಹ
ನರಸಿಂಹರಾಜಪುರ: ತಾಲೂಕಿನಿಂದ ಬಾಳೆಹೊನ್ನೂರಿಗೆ ಹೋಗುವ ಮಾರ್ಗ ಮಧ್ಯದ ಚಿಕ್ಕಅಗ್ರಹಾರದ ಸಮೀಪದ ಮುಖ್ಯ ರಸ್ತೆಯ ಪಕ್ಕದಲ್ಲಿ ದೊಡ್ಡ ಕೆರೆ ಇದ್ದು, ಇದಕ್ಕೆ ತಡೆಗೋಡೆ ಇಲ್ಲದೆ ವಾಹನ ಸಂಚಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.
ಚಿಕ್ಕಅಗ್ರಹಾರದ ಸಮೀಪದ ಮುಖ್ಯ ರಸ್ತೆಯಲ್ಲೇ ದೊಡ್ಡ ಕೆರೆ ಇದೆ. ಕೆರೆಯ ಪಕ್ಕದ ರಸ್ತೆಗೆ ತಡೆಗೋಡೆ ಇಲ್ಲವಾಗಿದೆ. ಮಳೆಗಾಲದಲ್ಲಿ ಕೆರೆಯು ತುಂಬಿ ರಸ್ತೆಗೆ ಸಮನಾಗಿ ನಿಲ್ಲುತ್ತದೆ. ಕೆರೆಯ ಸಮೀಪದ ರಸ್ತೆಯು ಇಳಿಜಾರಾಗಿದೆ ಹಾಗೂ ತಿರುವಿನಿಂದ ಕೂಡಿದೆ. ಇದರಿಂದ ವಾಹನ ಚಾಲಕರಿಗೆ ಸಮೀಪ ಬಂದ ಮೇಲೆ ಕೆರೆ ಇದೆ ಎಂದು ಗೊತ್ತಾಗುತ್ತದೆ. ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಕೆರೆಗೆ ಬೀಳುವ ಅಪಾಯ ಎದುರಾಗಲಿದೆ ಎಂದು ಜನತೆ ದೂರಿದ್ದಾರೆ.
ತಡೆಗೋಡೆ ಅಗತ್ಯ: ಕೆರೆಯ ಪಕ್ಕದ ರಸ್ತೆಯ ಬದಿಗೆ ತಡೆಗೋಡೆ ಮಾಡಿದರೆ ಮುಂದಿನ ಅಪಘಾತ ತಪ್ಪಿಸಬಹುದು. ಜತೆಗೆ ಇಳಿಜಾರು ರಸ್ತೆ ಪ್ರಾರಂಭಕ್ಕಿಂತ ಮುಂಚೆ ಕೆರೆ ಇರುವುದರ ಬಗ್ಗೆ ಮುನ್ನಚ್ಚರಿಕೆಯ ನಾಮಫಲಕ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಕೆರೆಯ ಹತ್ತಿರದ ರಸ್ತೆಯ ತಿರುವಿನಲ್ಲಿ ಪೊದೆ, ಗಿಡಗಳು ಬೆಳೆದಿದ್ದು, ಕೆರೆ ಇದೆ ಎಂಬುದೇ ಚಾಲಕರಿಗೆ ಗೋಚರವಾಗುವುದಿಲ್ಲ. ಎದುರಿನಿಂದ ಬರುವ ವಾಹನವೂ ಹತ್ತಿರ ಬರುವುವರೆಗೂ ಕಾಣಿಸುವುದಿಲ್ಲ. ಸಂಬಂಧಪಟ್ಟ ಇಲಾಖೆಯವರು ಕೆರೆಯ ಪಕ್ಕದ ರಸ್ತೆಯ ಎರಡೂ ಬದಿಯಲ್ಲಿ ಬೆಳೆದಿರುವ ಪೊದೆ, ಗಿಡ ಕಡಿದು ಸ್ವಚ್ಛಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.