ಗ್ರಾಮಗಳಲ್ಲಿ ಮಿತಿಮೀರಿದ ನೀರಿನ ಸಮಸ್ಯೆ
ಕ.ಪ್ರ.ವಾರ್ತೆ ಟಿ ಕಡೂರು ಟಿ ಏ.22
ಚುನಾವಣೆಗಳು ಬರುತ್ತವೆ, ಹೋಗುತ್ತವೆ ಆದರೆ ಜನರಿಗೆ ಎಷ್ಟು ಚುನಾವಣೆಗಳು ಬಂದರೂ ಕೇವಲ ಮತ ಹಾಕುವ ಕಾಯಕ ಬಿಟ್ಟರೆ ತಮ್ಮ ಊರಿನ ಮೂಲ ಸೌಕರ್ಯ ಕೊರತೆ ಸಮಸ್ಯೆ ಮಾತ್ರ ನೀಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಹನಿಹನಿ ನೀರಿಗೆ ಪರಿತಪಿಸುತ್ತಾ ಮೂಲ ಸೌಕರ್ಯಗಳನ್ನೂ ಕಾಣದಂತಹ ದುಸ್ಥಿತಿಗೆ ನಮ್ಮ ಗ್ರಾಮೀಣ ಪ್ರದೇಶದ ಜನ ತಲುಪಿದ್ದಾರೆ. ಬರಗಾಲವನ್ನೇ ಮೈಹೊದ್ದು ನಿಂತಿರುವ ಕಡೂರು ತಾಲೂಕಿನಲ್ಲಿ ಕೆಲವೇ ದಿನಗಳ ಹಿಂದೆ ಬಿದ್ದ ಮಳೆ ಭೂಮಿ ಸೇರುವ ಮೂಲಕ ಸೆಖೆ ಇನ್ನಷ್ಟು ಹೆಚ್ಚಾಗುತ್ತಿದೆ.
ಹನಿ ನೀರಿಗೂ ಪರಿತಾಪ: ಮಳೆ ನೀರು ಭೂ ತಾಯಿಯ ದಾಹ ನೀಗಿಸಲು ಕೂಡ ಸಾಕಾಗದಂತಹ ಸ್ಥಿತಿ ತಾಲೂಕಿನಲ್ಲಿ ತಲೆದೋರಿದ್ದು, ಗ್ರಾಮೀಣರು ಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಕಡೂರು ತಾಲೂಕಿನ ಗಡಿ ಭಾಗವಾದ ಪಂಚನಹಳ್ಳಿ ಹೋಬಳಿಯ ಕಟ್ಟಕಡೆಯ ತಿಮ್ಮಾಪುರ ಗ್ರಾಪಂ ವ್ಯಾಪ್ತಿಯ ಚೌಡಿಪಾಳ್ಯ, ನಿಡುವಳ್ಳಿ, ಉಪ್ಪಿನಹಳ್ಳಿ ಮತ್ತು ಸುತ್ತಮುತ್ತಲಲ್ಲಿ ನೀರಿನ ಅಭಾವ ಗಂಭೀರವಾಗಿದ್ದು, ದಿನದಿಂದ ದಿನಕ್ಕೆ ಸ್ಥಿತಿ ಪರಿಸ್ಥಿತಿ ಭೀಕರವಾಗುತ್ತಿದೆ.
200ಕ್ಕೂ ಅಧಿಕ ಮನೆಗಳಿರುವ ಚೌಡಿಪಾಳ್ಯ ಗ್ರಾಮ ಮೂಲ ಸೌಲಭ್ಯ ಇಲ್ಲದೆ ನಲುಗುತ್ತಿದೆ.
ಒಂದೆಡೆ ಇಡೀ ಊರಿಗೆ ಕುಡಿಯುವ ನೀರಿನ ಅಭಾವ ಎದುರಾಗಿದ್ದರೆ, ಮತ್ತೊಂದೆಡೆ ಊರಿನ ಚರಂಡಿಯನ್ನು ಸ್ವಚ್ಛ ಮಾಡದ ಹಿನ್ನೆಲೆಯಲ್ಲಿ ಚರಂಡಿಗಳು ಸೋಂಕಿನ ಕಾಯಿಲೆಗೆ ಆಹ್ವಾನ ನೀಡುತ್ತಿವೆ. ಚರಂಡಿಯನ್ನು ಸ್ವಚ್ಛಗೊಳಿಸದೆ ನೀರು ಸರಾಗವಾಗಿ ಹರಿದು ಹೋಗದ ಕಾರಣ ಕಸಕಡ್ಡಿ ತುಂಬಿಕೊಂಡು ಸೊಳ್ಳೆಗಳ ವಾಸ ಸ್ಥಾನವಾಗಿದೆ.
ಊರಿಗೊಂದೇ ನೀರಿನ ಟ್ಯಾಂಕ್: ಇನ್ನು ಊರಿಗೆ ಇರುವುದು ಕೇವಲ ಒಂದೇ ಒಂದು ನೀರಿನ ಟ್ಯಾಂಕ್. ಇನ್ನೊಂದು ಟ್ಯಾಂಕ್ ಆರೇಳು ವರ್ಷದ ಹಿಂದೆ ನಿರ್ಮಾಣ ಮಾಡಲಾಗಿದೆಯಾದರೂ ಇದುವರೆಗೂ ಈ ಟ್ಯಾಂಕಿಂದ ಊರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗಿಲ್ಲ.
ಅಲ್ಲದೆ ಗ್ರಾಮದಲ್ಲಿ ಜಾನುವಾರುಗಳ ಬಾಯಾರಿಕೆಯ ದಾಹ ತೀರಿಸಲೆಂದೇ ನೀರಿನ ತೊಟ್ಟಿ ನಿರ್ಮಿಸಿದ್ದರೂ, ತೊಟ್ಟಿಗೆ ನೀರಿನ ಸರಬರಾಜು ಸಂಪರ್ಕ ನೀಡಿಲ್ಲ. ಇದೇ ರೀತಿ ಗ್ರಾಮದ ಅಲ್ಲಲ್ಲಿ ಮೂರು ತೊಟ್ಟಿ ನಿರ್ಮಿಸಲಾಗಿದ್ದು, ಅವೂ ಕೂಡ ನಿರ್ವಹಣೆಯಿಲ್ಲದೆ ಸಂಪೂರ್ಣ ಹಾಳಾಗಿವೆ. ವಿಶೇಷವೆಂದರೆ ಈ ಮೂರು ತೊಟ್ಟಿಗಳನ್ನು ಯಾವ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ ಎಂದು ನಮಗೇ ತಿಳಿದಿಲ್ಲ ಎಂದು ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
ಕುಗ್ರಾಮ ಎಂಬ ಹಣೆಪಟ್ಟಿ: ಚೌಡಿಪಾಳ್ಯದ ಜನತೆ ಗ್ರಾಮದ ರಸ್ತೆ ಗುಂಡಿ ಗೊಟರುಗಳಾಗಿ ಹಾಳಾಗಿ ಹೋಗಿದ್ದರೂ, ಯಾರೂ ಗಮನಹರಿಸುತ್ತಿಲ್ಲ ಹಾಗಾಗಿ ಚೌಡಿಪಾಳ್ಯ ತಾಲೂಕಿನ ಕುಗ್ರಾಮ ಎಂಬ ಖ್ಯಾತಿಗೆ ಒಳಗಾಗಿದೆ ಎಂದು ಆರೋಪಿಸುತ್ತಾರೆ.
ಇನ್ನು ಗ್ರಾಮದಲ್ಲಿ ಎಲ್ಲಾ ಸಮುದಾಯದ ಶುಭ ಸಮಾರಂಭ ಮತ್ತಿತರ ಕಾರ್ಯಕ್ರಮ ಆಚರಿಸಲೆಂದೇ ಸರ್ಕಾರದಿಂದ 6 ವರ್ಷದ ಹಿಂದೆ ಚಾಲನೆ ನೀಡಲಾಗಿದ್ದ ಸಮುದಾಯ ಭವನ ಕಾಮಗಾರಿ ಮುಗಿಯದೆ ನೆನೆಗುದಿಗೆ ಬಿದ್ದಿದೆ. ಈ ಸಮುದಾಯ ಭವನ ನಿರ್ಮಾಣಕ್ಕೆ ನೀಡಲಾದ ಅನುದಾನ ದುರ್ಬಳಕೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಗ್ರಾಮವು ಎಲ್ಲಾ ರೀತಿಯ ಮೂಲ ಸವಲತ್ತುಗಳಿಂದ ವಂಚಿತವಾಗಿದೆ. ತಾಪಂ ಆಡಳಿತ ಹಾಗೂ ಗ್ರಾಪಂ ಈ ಗ್ರಾಮದ ಅಭಿವೃದ್ದಿಯನ್ನು ಕಡೆಗಣಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು ಈಗಾಗಾಲೇ ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ತಾಪಂ ಅಧಿಕಾರಿಗಳ ಭರವಸೆಯಿಂದ ಸದ್ಯಕ್ಕೆ ಸುಮ್ಮನಿದ್ದಾರೆ. ಸಮಸ್ಯೆ ಮತ್ತಷ್ಟಿರುವ ಚೌಡ್ಲುಪುರ ಸೇರಿದಂತೆ ಪಂಚಾಯ್ತಿ ವ್ಯಾಪ್ತಿಯ ಹಲವು ಗ್ರಾಮಗಳ ಸಮಸ್ಯೆ ನಿವಾರಣೆಗೆ ಇನ್ನೆಷ್ಟು ದಿನ ಕಾಯಬೇಕೋ ತಿಳಿಯದಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.