ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹೆಸರಿಗೆ ಸರ್ಕಾರಿ ಕಚೇರಿ, ಮೂಲ ಸೌಕರ್ಯ ಇಲ್ಲಾರಿ

Rashmi Kasaragodu
Updated On : 23 Apr 2014, 11:43 am

 ಆರ್. ತಾರಾನಾಥ್
ಕ.ಪ್ರ.ವಾರ್ತೆ   ಚಿಕ್ಕಮಗಳೂರು  ಏ.22
ಮೂಲ ಸವಲತ್ತುಗಳಿಲ್ಲದ ಸರ್ಕಾರಿ ಕಚೇರಿಗಳು..
 ಇದು, ಜಿಲ್ಲೆಯ ಮಲೆನಾಡಿನ ಅಥವಾ ಬಯಲುಸೀಮೆಯ ಗಡಿ ಭಾಗದಲ್ಲಿರುವ ಗ್ರಾಮ ಪಂಚಾಯಿತಿಗಳ ಕಥೆ ಅಲ್ಲ.
ಇಡೀ ಜಿಲ್ಲೆಗೆ ಸುಪ್ರೀಂ ಆಗಿರುವ ಜಿಲ್ಲಾಧಿಕಾರಿಗಳ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಂತ ಶಿಸ್ತಿನ ಇಲಾಖೆ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿರುವ ದುಸ್ಥಿತಿ.
ಯಾವುದಾದರೂ ಕೆಲಸ ನಿಮಿತ್ತ ಜಿಲ್ಲಾಧಿಕಾರಿಗಳ ಕಚೇರಿಗೆ ದೂರದ ಊರುಗಳಿಂದ ಪ್ರತಿದಿನ ಸಾರ್ವಜನಿಕರು ಬಂದು ಹೋಗುತ್ತಾರೆ. ಇಲ್ಲಿಗೆ ಬರುವವರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಬಿಟ್ಟರೆ ಇನ್ನುಳಿದಂತೆ ಯಾವುದೇ ಮೂಲ ಸವಲತ್ತುಗಳಿಲ್ಲ. ಪ್ರಮುಖವಾಗಿ ಕುಡಿಯುವ ನೀರು, ಸುಮಾರು 150 ಮಂದಿ ಸಿಬ್ಬಂದಿ ಹೊಂದಿರುವ ಈ ಕಚೇರಿಯಲ್ಲಿ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.
ಇನ್ನು ಕಚೇರಿಯ ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಸಾರ್ವಜನಿಕರ ಬಳಕೆಗಾಗಿ ಪ್ರತ್ಯೇಕವಾದ ಶೌಚಾಲಯದ ವ್ಯವಸ್ಥೆ ಇದೆ. ಇತ್ತೀಚೆಗೆ ಈ ಶೌಚಾಲಯದ ದುರಸ್ತಿ ಕಾರ್ಯ ನಡೆಯಿತು. ಇದಕ್ಕೆ ಪ್ರಥಮ ಹಂತದಲ್ಲಿ 5 ಲಕ್ಷ ಖರ್ಚಾಯಿತು. ಆದರೆ, ವ್ಯವಸ್ಥೆ ಮಾತ್ರ ಸರಿ ಹೋಗಿಲ್ಲ. ಈ ಶೌಚಾಲಯದೊಳಗೆ ಯಾರೂ ಪ್ರವೇಶ ಮಾಡಲಾರದ ಮಟ್ಟದಲ್ಲಿ ದುರ್ವಾಸನೆ ಬರುತ್ತಿದೆ. ಶೌಚಾಲಯದ ನೀರು ಸರಗವಾಗಿ ಹರಿದು ಹೋಗುವ ಒಳ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೀರು ನಿಂತಿದ್ದು, ವಾಸನ ಬರುತ್ತಿದೆ. ಇಲ್ಲಿ ಕೆಲಸ ಮಾಡುವ ಕಚೇರಿ ಸಿಬ್ಬಂದಿ ನೆಮ್ಮದಿಯಿಂದ ಕುಳಿತು ಕೆಲಸ ಮಾಡಲಾರದ ಪರಿಸ್ಥಿತಿ ಇದೆ.
ಎಸ್ಪಿ ಕಚೇರಿ: ಇನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಮೀಪದಲ್ಲಿರುವ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲೂ ಇದೆ ಪರಿಸ್ಥಿತಿ. ಇಲ್ಲಿ ಶೌಚಾಲಯ ಇದೆ. ಆದರೆ, ನಿರ್ವಹಣೆ ಇಲ್ಲ. ಅದ್ದರಿಂದ ಅದರ ಬಳಕೆಗೆ ಪೊಲೀಸರು ಹಿಂದೆ ಮುಂದೆ ನೋಡುವ
ಪರಿಸ್ಥಿತಿ ಇದೆ.
ಕುಡಿವ ನೀರಿನ ಅವ್ಯವಸ್ಥೆ: ಇಲ್ಲೂ ಪ್ರತ್ಯೇಕವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯಕ್ಕೆ ಹೊಂದಿಕೊಂಡಂತೆ ಹೊರ ಭಾಗದಲ್ಲಿರುವ ನಲ್ಲಿಯ ನೀರನ್ನು ಕುಡಿಯಲು ಬಳಸಬೇಕಾದ ಪರಿಸ್ಥಿತಿ ಇದೆ.
ಪರದಾಟ: ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಕಾಣಲು ಬರುವ ಸಾರ್ವಜನಿಕರು, ಅಧಿಕಾರಿಗಳು ಬರುವವರೆಗೆ ಕಾಯಬೇಕಾಗುತ್ತದೆ. ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಅದರಲ್ಲೂ ಬೇಸಿಗೆ ಕಾಲವಾಗಿದ್ದರಿಂದ ಸಾರ್ವಜನಿಕರು ಆಜಾದ್ ಪಾರ್ಕ್ ವೃತ್ತಕ್ಕೆ ಬಂದು ಯಾವುದಾದರೂ
ಹೋಟೆಲ್‌ಗಳಿಗೆ ಹೋಗಿ ನೀರು ಕುಡಿದು ವಾಪಸ್ ಬರಬೇಕಾದ ಪರಿಸ್ಥಿತಿ ಇದೆ. ಇನ್ನು ಶೌಚಾಲಯಕ್ಕೆ ಹೋಗುವವರು ಸಹ ಆಜಾದ್ ಪಾರ್ಕ್ ವೃತ್ತದಲ್ಲಿರುವ ಸುಲಭ ಶೌಚಾಲಯಕ್ಕೆ ಬರಬೇಕಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಇದರ ಜತೆಗೆ ಈ ಎರಡು ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸಹ ಪರದಾಡಬೇಕಾಗಿದೆ. ತಮಗೆ ಆಗುತ್ತಿರುವ ಅನಾನುಕೂಲದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ಇಲ್ಲಿನ ಸಿಬ್ಬಂದಿಗೆ ಆಗುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಮೌನ ವಹಿಸಿದ್ದಾರೆ.
ಸುತ್ತಮತ್ತ: ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಷ್ಟೇ ಅಲ್ಲ, ಈ ಕಚೇರಿಗಳ ಸಮೀಪದಲ್ಲಿರುವ ಜಿಲ್ಲಾ ಆಟದ ಮೈದಾನದಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.
 ಬೆಳಗ್ಗೆ, ಸಂಜೆ ವೇಳೆಗೆ ವಾಕ್‌ಗೆ ಬರುವವರಿಗೆ ತುರ್ತಾಗಿ ಕುಡಿಯುವ ನೀರು ಬೇಕಾದರೆ ಅವರು ತಮ್ಮ ತಮ್ಮ ಮನೆಗಳಿಗೆ ವಾಪಸ್ ಹೋಗಬೇಕಾಗಿದೆ.
ಜಿಲ್ಲಾಧಿಕಾರಿ ಕಚೇರಿ ಹಾಗೂ ವಾರ್ತಾ ಇಲಾಖೆಯ ಶೌಚಾಲಯದ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದಿರುವುದರಿಂದ ಪ್ರವಾಸಿ ಮಂದಿರದ ಸಮೀಪದಲ್ಲಿ ಒಳಚರಂಡಿ ನೀರು ಮೈದಾನದಲ್ಲಿ ಹರಿದು ಹೋಗುತ್ತಿದೆ. ಇಲ್ಲಿ ಓಡಾಡುವ ಪಾದಚಾರಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.
ಜಿಲ್ಲೆಯ ಜನರಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ನೀಡಲು ಗಮನಹರಿಸಬೇಕಾದ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿಯೇ ಇಂತಹ ಪರಿಸ್ಥಿತಿ ಇರುವಾಗ ಇನ್ನು ಜಿಲ್ಲೆಯ ಸಮಸ್ಯೆಗಳು ಬಗೆಹರಿಯುವುದಾದರೂ ಹೇಗೆಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.


ಸಮಸ್ಯೆಗಳೇನೇನು..?

 ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಕಾಣಲು ಬರುವ ಸಾರ್ವಜನಿಕರು, ಅಧಿಕಾರಿಗಳು ಬರುವವರೆಗೆ  ಕಾಯಬೇಕಾಗುತ್ತದೆ
 ಶೌಚಾಲಯಕ್ಕೆ ಹೋಗುವವರು ಆಜಾದ್ ಪಾರ್ಕ್ ವೃತ್ತದಲ್ಲಿಇರುವ ಸುಲಭ ಶೌಚಾಲಯಕ್ಕೆ ಬರಬೇಕಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ
 ಪ್ರತ್ಯೇಕವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯಕ್ಕೆ ಹೊಂದಿಕೊಂಡಂತೆ ಹೊರ ಭಾಗದಲ್ಲಿರುವ ನಲ್ಲಿಯ ನೀರನ್ನು ಕುಡಿಯಲು ಬಳಸಬೇಕಾದ ಪರಿಸ್ಥಿತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement