ತನಿಕೋಡು ಪ್ರಕರಣ ಸಿಬಿಐಗೆ ಒಪ್ಪಿಸಿ
ನರಸಿಂಹರಾಜಪುರ: ಶೃಂಗೇರಿ ಸಮೀಪದ ತನಿಕೋಡು ಅರಣ್ಯ ತಪಾಸಣಾ ಗೇಟಿನ ಬಳಿ ಶನಿವಾರ ಮುಂಜಾನೆ ನಡೆದ ಮಂಗಳೂರಿನ ಜೋಕಟ್ಟೆ ಕಬೀರ್ ಎನ್‌ಕೌಂಟರ್ ಪ್ರಕರಣದ ಸತ್ಯಾಸತ್ಯತೆ ತಿಳಿದುಕೊಳ್ಳಲು ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಶೃಂಗೇರಿ ಕ್ಷೇತ್ರದ ಬ್ಯಾರಿ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಖಾದರ್ ಒತ್ತಾಯಿಸಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೃಂಗೇರಿ ಸಮೀಪದ ತನಿಕೋಡು ಗೇಟಿನ ಬಳಿ ಜಾನುವಾರಗಳನ್ನು ಸಾಗಿಸುತ್ತಿದ್ದ ತಂಡದ ಮೇಲೆ ಏಕಾಏಕಿ ಗುಂಡು ಹಾರಿಸಿ ತಂಡದಲ್ಲಿದ್ದ ಕಬೀರ್ ಎಂಬಾತನನ್ನು ನಕ್ಸಲ್ ನಿಗ್ರಹದಳ ಎನ್‌ಕೌಂಟರ್ ಮಾಡಿದೆ. ತಪಾಸಣಾ ಠಾಣೆ ಬಳಿ ಕುಳಿತಿದ್ದ ನಕ್ಸಲ್ ನಿಗ್ರಹದಳದ ಸಿಬ್ಬಂದಿ ಗುಂಡು ಹಾರಿಸಿ ಅಮಾಯಕನನ್ನು ಕೊಲೆ ಮಾಡಿದೆ. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಬೇಕಾದರೆ ಸಿಬಿಐಗೆ ವಹಿಸಲೇ ಬೇಕು ಎಂದು ಅವರು ಆಗ್ರಹಿಸಿದರು.
ಹಲ್ಲೆ ಖಂಡನೀಯ: ಎನ್‌ಕೌಂಟರ್ ಘಟನೆ ನಂತರ ಕಬೀರ್ ಕುಟುಂಬದವರು ಶವ ಪಡೆಯಲು ಶೃಂಗೇರಿಗೆ ಆಗಮಿಸಿದ ವೇಳೆ ಕೆಲವರು ಹಲ್ಲೆ ನಡೆಸಿ, ಕಾರನ್ನು ಜಖಂಗೊಳಿಸಿದ್ದಾರೆ. ಈ ಪ್ರಕರಣದ ಬಗ್ಗೆಯೂ ಸೂಕ್ತ ತನಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಳ್ಳಬೇಕು ಎಂದು ಒತ್ತಾಯಿಸಿದರು.
ಕಾನೂನು ಬಾಹಿರವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದರೆ ಅದನ್ನು ಖಂಡಿಸುತ್ತೇವೆ. ಆದರೆ, ನಕ್ಸಲ್ ನಿಗ್ರಹದಳ ಕಾನೂನು ಕೈಗೆ ತೆಗೆದುಕೊಂಡು ಜಾನುವಾರು ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ಗುಂಡು ಹಾರಿಸಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.
ತಾಲೂಕು ಬ್ಯಾರಿ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಬದ್ರಿಯಾ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಇದಿನಬ್ಬ ಬ್ಯಾರಿ, ಎನ್.ಎ. ಶೇಖಬ್ಬ, ನ.ರಾ.ಪುರ ತಾಲೂಕು ಬ್ಯಾರಿ ಒಕ್ಕೂಟದ ಅಧ್ಯಕ್ಷ ಕೆ.ಎ. ಅಬೂಬಕರ್ ಉಪಸ್ಥಿತರಿದ್ದರು.