'ಹೈನುಗಾರಿಕೆ ಅಭಿವೃದ್ಧಿಯ ಸರ್ಕಾರದ ಯೋಜನೆ ಸದುಪಯೋಗವಾಗಲಿ'
ಚಿಕ್ಕಜಾಜೂರು: ಸರ್ಕಾರ ಮತ್ತು ಸಂಘ ಸಂಸ್ಥೆಗಳು ಹಾಲು ಉತ್ಪಾದನೆಗೆ ಅನೇಕ ಯೋಜನೆಯ ಮೂಲಕ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದನ್ನು ಗ್ರಾಮೀಣ ಪ್ರದೇಶದ ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಪಶು ಸಂಗೋಪನಾ ಇಲಾಖೆಯ ನಿವೃತ್ತ ನಿರ್ದೇಶಕ ಡಾ. ರಹಮತ್ ಉಲ್ಲಾ ತಿಳಿಸಿದರು.
ಬಿ.ದುರ್ಗ ಹೋಬಳಿ ಚನ್ನಪಟ್ಟಣ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶಿವಮೊಗ್ಗ ಹಾಲು ಉತ್ಪಾದಕರ ಸಂಘವು ಆಯೋಜಿಸಿದ್ದ ನೂತನ ಹಾಲು ಉತ್ಪಾದಕರ ಸಂಘ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಹೈನುಗಾರಿಕೆ ಮಾಡಿ ಆರ್ಥಿಕವಾಗಿ ಸಬಲರಾಗಬಹುದು. ಪಶು ಸಂಗೋಪನೆ ಮಾಡುವವರಿಗೆ ಸಂಘ ಸಂಸ್ಥೆಗಳು ಆರ್ಥಿಕ ನೆರವು ನೀಡುವುದಲ್ಲದೆ ಪಶು ಸಂಗೋಪನೆ ಬಗ್ಗೆ ತರಬೇತಿ ನೀಡಲಾಗುವುದು. ಇದರಲ್ಲಿ ಉತ್ತಮ ತಳಿ ನಿರ್ವಹಣೆ, ಶುದ್ಧ ಹಾಲು ಉತ್ಪಾದನೆ, ರಾಸುಗಳ ಆರೋಗ್ಯ ಮತ್ತು ಹಸಿರು ಮೇವು ಬೆಳೆಯುವ ಬಗ್ಗೆ ತರಬೇತಿ ನೀಡಲಾಗುವುದು. ರೈತರು ಮತ್ತು ಮಹಿಳೆಯರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಹೈನುಗಾರಿಕೆಯಿಂದ ಸಾವಯವ ಕೃಷಿ ಮಾಡಲು ಅನುಕೂಲವಾಗುವುದು. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುವುದು ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಎಸ್. ಜನಾರ್ದನ್ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಪ್ರಯತ್ನಿಸಬೇಕು. ಮಹಿಳೆಯರ ಮತ್ತು ಗ್ರಾಮದ ಆಭಿವೃದ್ಧಿಯೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಆರ್. ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ಡಾ. ನಟರಾಜ್, ಎ.ಆರ್. ಮಧುಕರ್, ಕೆ.ಟಿ. ಪ್ರಾಣೇಶ್ ಉಪಸ್ಥಿತರಿದ್ದರು. ಮಹಿಳೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಮಂಜುನಾಥ್ ಸ್ವಾಗತಿಸಿದರು. ಫಕೀರೇಶ್ ವಂದಿಸಿದರು.