'ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ'
ಶೃಂಗೇರಿ: ಪ್ರತಿಯೊಬ್ಬ ವ್ಯಕ್ತಿ ಪ್ರಭಾವಶಾಲಿಯಾಗಿ ಹೊರಹೊಮ್ಮಲು ಸ್ವಸ್ಥ ಮನಸ್ಸಿನ ಜೊತೆಗೆ ಶಾರೀರಿಕ ಸದೃಢತೆ ಬಹಳ ಮುಖ್ಯ. ಹಾಗೇಯೆ ವಿದ್ಯಾರ್ಥಿಗಳಲ್ಲಿ ಬೌದ್ಧಿಕ, ಶಾರೀರಿಕ ಸದೃಢತೆಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಪೂರಕವಾಗಿವೆ ಎಂದು ಆಂಗ್ಲ ಪ್ರಾಧ್ಯಾಪಕ ಪ್ರೊ. ಕೆ.ಜಿ.ನರಸಿಂಹಶಾಸ್ತ್ರಿ ಹೇಳಿದ್ದಾರೆ.
ಅವರು ಪಟ್ಟಣದ ಸ.ಪ್ರ.ದ. ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಸಮಾರೋಪದಲ್ಲಿ ಮಾತನಾಡಿದರು.
ಕಡೆಗಣನೆ ಸಲ್ಲ: ಕನ್ನಡ ಕಸ್ತೂರಿ ಭಾಷೆ. ಇದು ನಮ್ಮ ಮಾತೃಭಾಷೆ. ಆದರೆ ಇಂಗ್ಲೀಷ್ ವ್ಯವಹಾರ ಭಾಷೆ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಇಂಗ್ಲಿಷ್ ಬಳಕೆ ಅನಿವಾರ್ಯ. ಆದರೆ ಕನ್ನಡ ಕಡೆಗಣಿಸುವ ಕೆಲಸ ಮಾಡಬಾರದು. ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಮುಂದಿನ ಪರಂಪರೆಗೆ ಬೆಳೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದವರು ಹೇಳಿದರು.
ಪ್ರತಿಯೊಬ್ಬರೂ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು. ವ್ಯಕ್ತಿ ವ್ಯಕ್ತಿಯಾಗಲು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಒಳ್ಳೆಯ ಪಾರದರ್ಶಕ ವ್ಯಕ್ತಿತ್ವದಿಂದ ಸಮಾಜದಲ್ಲಿ ನಾವು ಸುಖ ನೆಮ್ಮದಿಯಿಂದ ಜೀವನ ನಡೆಸಬಹುದು. ಸಮಾಜ ನಮಗೇನು ನೀಡಿತು ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ನಾವು ನಮ್ಮಿಂದ ಏನಾದರೂ ಕೊಡುಗೆಗಳನ್ನು ಸಮಾಜಕ್ಕೆ ನೀಡಿದಾಗ ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.
ನೈತಿಕ ಮೌಲ್ಯ ಅಧಃಪತನ: ಪ್ರಜಾಪ್ರಭುತ್ತದ ಅಳಿವು, ಉಳಿವು ಜನತೆಯ ಕೈಯಲ್ಲಿದೆ. ಇತ್ತೀಚಿನ ದಿನಗಳಲ್ಲಿನ ವ್ಯವಸ್ಥೆಯನ್ನು ಕಂಡರೆ ಆಶ್ಚರ್ಯವೆನಿಸುತ್ತದೆ. ನೈತಿಕ ಮೌಲ್ಯ ಅಧಃಪತನವಾಗುತ್ತಿದೆ. ಮೌಲ್ಯಧಾರಿತ ರಾಜಕಾರಣ ಮಾಯವಾಗುತ್ತಿದೆ. ಭ್ರಷ್ಟಾಚಾರದಂತಹ ಪ್ರಕರಣ ವ್ಯವಸ್ಥೆಯ ಅಧಃಪತನಕ್ಕೆ ಕಾರಣವಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಚಾರ್ಯ ಪ್ರೊ. ಕೆ.ಜಿ. ಸಿದ್ದಲಿಂಗೇಗೌಡ ಮಾತನಾಡಿ, ಜೀವನದಲ್ಲಿ ಹಣ ಮುಖ್ಯವಲ್ಲ. ಮೌಲ್ಯ ಮುಖ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಮೌಲ್ಯ ಅಳವಡಿಸಿಕೊಳ್ಳಬೇಕು. ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ವಾಣಿಜ್ಯಶಾಸ್ತ್ರ ವಿಭಾಗದ ಆಶಾಲತಾ, ದೈಹಿಕ ಶಿಕ್ಷಣ ವಿಭಾಗದ ಅಬ್ದುಲ್ ಕುನ್ಹಿ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಧ್ಯಾರಾಣಿ ಸ್ವಾಗತಿಸಿದರು. ಸುಪ್ರಿತಾ ನಿರೂಪಿಸಿದರು. ಅಭಿಷೇಕ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮ ನಡೆಯಿತು.