ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಬೀರ್‌ಗೆ ಗುಂಡು: ಎಎನ್‌ಎಫ್ ಪೇದೆ ಬಂಧನ

Rashmi Kasaragodu
Updated On : 26 Apr 2014, 11:26 am

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಏ.25
ತನಿಕೋಡು ಬಳಿ ಗುಂಡು ಹಾರಿಸಿ ಓರ್ವರನ್ನು ಹತ್ಯೆ ಮಾಡಿರುವ ಎಎನ್‌ಎಫ್ ಸಿಬ್ಬಂದಿಯನ್ನು ಶೃಂಗೇರಿ ಪೊಲೀಸರು ಶುಕ್ರವಾರ ಬಂಧಿಸಿದರು.
ಉಮ್ಮರ್ ಫಾರೂಕ್ ಎಂಬವರು ನೀಡಿರುವ ದೂರಿನನ್ವಯ ಎಎನ್‌ಎಫ್ ಸಿಬ್ಬಂದಿ ನವೀನ್ ನಾಯಕ್ ಅವರನ್ನು ಬಂಧಿಸಲಾಗಿದೆ.
ಏ. 19 ರಂದು ಬೆಳಗಿನ ಜಾವ ಶೃಂಗೇರಿಯ ತಾಲೂಕಿನ ತನಿಕೋಡು ಬಳಿ ಇರುವ ಅರಣ್ಯ ಚೆಕ್‌ಪೋಸ್ಟ್ ಬಳಿ ಬರುವಾಗ ಎಎನ್‌ಎಫ್ ಸಿಬ್ಬಂದಿ ನವೀನ್ ನಾಯಕ್ ಅವರು ತಮ್ಮ ಗುಂಪಿನಲ್ಲಿದ್ದ ಕಬೀರ್ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮನ್ನು ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿ ನಿಂದಿಸಿದ್ದಾರೆ ಎಂದು ಉಮ್ಮರ್ ಫಾರೂಕ್ ಅವರು ಗುರುವಾರ ಕೊಟ್ಟ ದೂರಿನನ್ವಯ ನವೀನ್ ನಾಯಕ್ ವಿರುದ್ಧ ಶೃಂಗೇರಿ ಪೊಲೀಸರು 302 ಕೇಸನ್ನು ದಾಖಲು ಮಾಡಿಕೊಂಡಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ಶುಕ್ರವಾರದಂದು ಶೃಂಗೇರಿಗೆ ಸಿಐಡಿ, ಕೆಎಸ್‌ಆರ್‌ಪಿ, ನಕ್ಸಲ್ ನಿಗ್ರಹ ಪಡೆಯ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ನವೀನ್ ನಾಯಕ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಶುಕ್ರವಾರ ರಾತ್ರಿ ಅವರನ್ನು ಶೃಂಗೇರಿ ಪೊಲೀಸರು ಬಂಧಿಸಿದರು.
ಕೆಎಸ್‌ಆರ್‌ಪಿ ಎಡಿಜಿಪಿ ರವೀಂದ್ರನಾಥ್, ಅಂತರಿಕ ಭದ್ರತೆಯ ಎಡಿಜಿಪಿ ಅಮರ್‌ಕುಮಾರ್ ಪಾಂಡೆ, ಸಿಐಡಿ ಡಿಐಜಿ ಸುಮೇಂದ್ರ ಮುಖರ್ಜಿ, ಎಎನ್‌ಎಫ್ ಕಮಾಂಡೆಂಟ್ ಸಂತೋಷ್‌ಕುಮಾರ್ ಅವರು ನವೀನ್ ನಾಯಕ್ ಹಾಗೂ ಶೂಟೌಟ್ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಎಎನ್‌ಎಫ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮರ್‌ಕುಮಾರ್ ಪಾಂಡೆ ಅವರು, ತನಿಕೋಡು ಚೆಕ್‌ಪೋಸ್ಟ್ ಬಳಿ ಆಗಿರುವುದು ಆಕಸ್ಮಿಕ ಘಟನೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿದಿಂದ ಕ್ರಮ ವಹಿಸಲಾಗಿದೆ ಎಂದರು.
ಗೋವುಗಳನ್ನು ಸಾಗಿಸುತ್ತಿದ್ದ ಕಬೀರ್, ರಫೀಕ್ ಹಾಗೂ ಉಮರ್ ಫಾರುಕ್ ಅವರ ವಿರುದ್ಧ ಕಾರ್ಕಳ, ಪಣಂಬೂರು ಸೇರಿದಂತೆ ವಿವಿಧೆಡೆ ಅಕ್ರಮವಾಗಿ ಗೋ ಸಾಗಾಣಿಕೆ ಮಾಡಿರುವ ಬಗ್ಗೆ ಹಲವು ಪ್ರಕರಣಗಳು ಈ ಹಿಂದೆ ದಾಖಲಾಗಿವೆ ಎಂದು ಹೇಳಿದರು.
ಈ ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ, ತಮ್ಮನ್ನು ಈ ಘಟನೆಯ ಬಗ್ಗೆ ತನಿಖೆ ನಡೆಸಲು ಕಾರ್ಯನಿರ್ವಾಹಕ ಜಿಲ್ಲಾ ದಂಡಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಇದು, ಸಿಐಡಿ ತನಿಖೆಗೆ ಪರ್ಯಾಯವಾದ ತನಿಖೆ ಅಲ್ಲ. ಆದರೆ, ದಂಡಾಧಿಕಾರಿಗಳು ಪ್ರತ್ಯೇಕವಾಗಿ ನಡೆಸುವ ವಿಚಾರಣೆ ಇದಾಗಿದೆ ಎಂದು ಹೇಳಿದರು.
ಪ್ರಮುಖವಾಗಿ ಮೂರು ಅಂಶಗಳ ಆಧಾರದ ಮೇಲೆ ವಿಚಾರಣೆ ನಡೆಸಲಾಗುವುದು. ಒಂದು- ಕಬೀರ್‌ನ ಸಾವಿಗೆ ಕಾರಣ, ಎರಡು- ಘಟನಾವಳಿ ಹಾಗೂ ಸಂದರ್ಭ, ಮೂರು- ಶೂಟೌಟ್‌ಗಿಂತ ಮೊದಲು ಎಎನ್‌ಎಫ್ ತೆಗೆದುಕೊಂಡ ಮುನ್ನೆಚ್ಚರಿಕೆ. ಈ ಅಂಶಗಳನ್ನು ಪರಿಗಣಿಸಿ 45 ದಿನಗಳೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ ಎಂದು ತಿಳಿಸಿದರು.



'ಸಿಬಿಐಗೆ ಒಪ್ಪಿಸಲಿ'
ಬಾಳೆಹೊನ್ನೂರು: ತನಿಕೋಡಿನಲ್ಲಿ ನಡೆದ ಕಬೀರ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಸಮೀಪದ ಮಸೀದಿಕೆರೆಯ ಜುಮ್ಮಾ ಮಸೀದಿ ಅಧ್ಯಕ್ಷ ಟಿ.ಎಂ. ನಾಸಿರ್ ಒತ್ತಾಯಿಸಿದ್ದಾರೆ. ಇಲ್ಲಿನ ಜೇಸಿ ವೃತ್ತದಲ್ಲಿ ಮುಸ್ಲಿಂ ಸಂಘಟನೆಗಳು, ವಿವಿಧ ಪಕ್ಷಗಳು ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮೃತ ಕಬೀರ್ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕೆಂದರು. ಮಸೀದಿಯ ಎಸ್.ಎಂ. ಸರ್ತಾಜ್, ಮಧುಸೂದನ್, ಜಾನ್ ವಿಲ್ಫ್ರೆಡ್ ಡಿಸೋಜಾ, ಸಿಪಿಐ ಮುಖಂಡ ಕಳಸಪ್ಪ, ದಸಂಸ ಕುಮಾರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement