ರಸ್ತೆ ದುರಸ್ತಿಗೆ ಹಣ ಅಗತ್ಯ'
ನರಸಿಂಹರಾಜಪುರ: ಇಲ್ಲಿನ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ನಡೆದ ಕಾಂಕ್ರಿಟ್ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದನ್ನು ಸರಿಪಡಿಸಲು ಹಣ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎಂದು ಶಾಸಕ ಡಿ.ಎನ್. ಜೀವರಾಜ್ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದ ಎಲ್ಲಾ ಪಪಂ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ತಲಾ ರು. 5 ಕೋಟಿ ಮಂಜೂರಾಗಿತ್ತು. ಎನ್.ಆರ್. ಪುರದಲ್ಲೂ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿತ್ತು. ಆದರೆ, ಚುನಾವಣೆ ಬಂದು ಸರ್ಕಾರ ಬದಲಾಯಿತು ಎಂದರು.
ಅಗಲ ಕಡಿಮೆ: ನಂತರ ಆಡಳಿತ ಪಕ್ಷದವರು ನ.ರಾ. ಪುರ ಪಟ್ಟಣದ ವಿವಿಧ ವಾರ್ಡಿನಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದು, ಆ ಕಾಂಕ್ರಿಟ್ ರಸ್ತ್ತೆಗಳು ಹಿಂದೆ ಇದ್ದ ರಸ್ತೆಗಿಂತ ಒಂದು ಅಡಿ ಎತ್ತರವಾಗಿದೆ. ರಸ್ತೆಯ ಅಗಲವೂ ಕಡಿಮೆಯಾಗಿದೆ. ಇದರಿಂದ ಈ ರಸ್ತೆಯಲ್ಲಿ ಎರಡು ವಾಹನ ಬಂದರೆ ಜಾಗ ಸಾಕಾಗುವುದಿಲ್ಲ. ರಸ್ತೆ ಬದಿಗೆ ಬಂದರೆ ವಾಹನ ಅಪಘಾತವಾಗುವ ಸಂಭವವಿದೆ ಎಂದವರು ತಿಳಿಸಿದರು.
ಆದ್ದರಿಂದ ಹೊಸದಾಗಿ ನಿರ್ಮಾಣವಾಗಿರುವ ಕಾಕ್ರಿಟ್ ರಸ್ತೆಯ ಎರಡೂ ಬದಿಗಳಲ್ಲಿ ತಗ್ಗಾಗಿರುವ ಜಾಗದಲ್ಲಿ ಚರಂಡಿಯವರೆಗೆ ರಸ್ತೆಯನ್ನು ಏರಿಸಬೇಕಾಗಿದೆ. ಈ ಬಗ್ಗೆ ನಾನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಮುಖ್ಯ ಎಂಜಿನಿಯರ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ಅವರಿಗೆ ಮನದಟ್ಟು ಮಾಡಿದ್ದೇನೆ. ರಸ್ತೆ ವೀಕ್ಷಿಸುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ರಸ್ತೆಯನ್ನು ಏರಿಸಿ ಎರಡೂ ಬದಿಯಲ್ಲಿ ಇಂಟರ್ ಲಾಕ್ ಹಾಕಿಸಬೇಕು. ಈ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದೇನೆ. ಇಡೀ ರಸ್ತೆ ಸಮತಟ್ಟಾಗಿರಬೇಕು. ಸಾರ್ವಜನಿಕರಿಗೆ ಉಪಯೋಗವಾಗುವ ಕೆಲಸವನ್ನು ಮಾಡಬೇಕಾಗಿದೆ ಎಂದರು.