ಶೋಷಿತರ ದನಿಯಾಗಿದ್ದ ಕೃಷ್ಣಪ್ಪ
ಕ.ಪ್ರ.ವಾರ್ತೆ, ಹಿರಿಯೂರು, ಏ.25
ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಅವರ ಅಕಾಲಿಕ ನಿಧನದಿಂದಾಗಿ ರಾಜ್ಯ ರಾಜಕಾರಣದಲ್ಲಿ ಶೋಷಿತ ಸಮುದಾಯಗಳ ಪರವಾದ ಗಟ್ಟಿದನಿ ಉಡುಗಿದಂತಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಿ.ಯಶೋಧರ್ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಜೆಡಿಎಸ್ ಘಟಕದ ವತಿಯಿಂದ ಆಯೋಜಿಸಿದ್ದ ದಿ. ಎ.ಕೃಷ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಮತ್ತು ಸಾಮೂಹಿಕ ನಾಯಕತ್ವ ಪ್ರತಿಪಾದಿಸಿ ದುರ್ಬಲರಿಗೆ ಶಕ್ತಿಯಾಗಿದ್ದ ಎ.ಕೃಷ್ಣಪ್ಪ ಅವರು ಇಲ್ಲವಾಗಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಬಿ.ಎಚ್. ಮಂಜುನಾಥ್ ಮಾತನಾಡಿ, ಕೃಷ್ಣಪ್ಪ ಅವರು ಕೇವಲ ಔಪಚಾರಿಕವಾಗಿ ರಾಜಕಾರಣ ಮಾಡುವ ಪ್ರವೃತ್ತಿ ಮೈಗೂಡಿಸಿಕೊಂಡಿರಲಿಲ್ಲ. ಬೇರುಮಟ್ಟದ ಕಾರ್ಯಕರ್ತರೊಡಗಿನ ನೇರ ಸಂಪರ್ಕ ಮತ್ತು ಸಹ ಸ್ಪಂದನದಿಂದಾಗಿ ಅವರು ಪಕ್ಷದ ಜೀವ ಚಿಲುಮೆ ಆಗಿದ್ದರು. ಹತಾಶ ಪ್ರವೃತ್ತಿಯನ್ನು ಕೃಷ್ಣಪ್ಪ ಅವರು ಎಂದೂ ಇಷ್ಟಪಡುತ್ತಿರಲಿಲ್ಲ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಶಿವಪ್ರಸಾದ್ ಗೌಡ ಮಾತನಾಡಿ, ಕಳೆದ ನಾಲ್ಕೈದು ದಶಕಗಳ ರಾಜಕೀಯ ಜೀವನದುದ್ದಕ್ಕೂ ಶಾಸಕ, ಮಂತ್ರಿಯಾಗಿ ಕೃಷ್ಣಪ್ಪ ಅವರು ಸಾಧಿಸಿದ್ದು ಅಪಾರವಾಗಿದೆ. ಆದರ್ಶಗಳನ್ನು ಮೈಗೂಡಿಸಿಕೊಂಡು ಎಲ್ಲರೂ ನಡೆಯಬೇಕು. ರಾಜಕಾರಣ ನಿಂತನೀರಾಗಿರುವ ಇಂದಿನ ಸಂದರ್ಭದಲ್ಲಿ ಕೃಷ್ಣಪ್ಪನವರು ಹಠಾತ್ ಅಗಲಿ ಹೋಗಿರುವುದು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಅಪಾರ ನೋವು ತಂದಿದೆ ಎಂದರು.
ಕೆ.ಶಂಕರ್‌ಮೂರ್ತಿ, ಸಿ.ಪ್ರವೀಣ್, ಪನ್ನೀರ್ ಸೆಲ್ವಂ, ಮೊಹಮ್ಮದ್ ಫಕೃದ್ದೀನ್, ಕೆ.ಎಲ್. ರಾಮಸ್ವಾಮಿ ಮೊದಲಾದವರು ಮಾತನಾಡಿದರು.
ಪಕ್ಷದ ಮುಖಂಡರಾದ ಕೆ.ಮಂಜುನಾಥ್, ಗುಣಶೇಖರ್, ಹೇಮಂತ್‌ರಾಜು, ಟಿ.ಬಿ. ಚಂದ್ರಣ್ಣ, ಆಲೂರು ತಮ್ಮಣ್ಣ, ಗೋಪಿ ಯಾದವ್, ಕೆ.ಟಿ. ತಿಪ್ಪೇಸ್ವಾಮಿ, ಪಾಂಡು, ಎಂ.ಸಿ. ಮಹಲಿಂಗಪ್ಪ, ಎಚ್.ಎಸ್. ರವಿಶಂಕರ್,ಪಿ.ಎಂ. ಕರಿಯಪ್ಪ, ಮ್ಯಾಕ್ಲೂರಹಳ್ಳಿ ಕರಿಯಪ್ಪ, ಗೋಪಿ, ಚಂದ್ರು, ಲಕ್ಕಪ್ಪ, ಮಾರಪ್ಪ, ನಯಾಜ್, ಶಿವಣ್ಣ, ಜಯಕುಮಾರ್, ಪಾಂಡು, ಶಿವಲಿಂಗಪ್ಪ, ರುದ್ರೇಶ್, ಪಾಂಡಪ್ಪ, ಶ್ರೀನಿವಾಸ್, ವಿ.ಎಚ್.ರಾಜು ಮೊದಲಾದವರು ಉಪಸ್ಥಿತರಿದ್ದರು.