ಹಜರತ್ ದರ್ಗಾ ಉರುಸ್‌ಗೆ ಚಾಲನೆ
ಕ.ಪ್ರ.ವಾರ್ತೆ, ಹೊಸನಗರ, ಏ.25
ಹಿಂದೂ ಮುಸ್ಲಿಂ ಭಾವೈಕ್ಯತಾ ತಾಣವಾಗಿ ಗಮನ ಸೆಳೆದ ತಾಲೂಕಿನ ನಗರ ಸಮೀಪದ ಹಜರತ್ ಶೇಖುಲ್ ಅಕ್ಬರ್ ಮಅಸುಂಷಾ ವಲಿಯುಲ್ಲಾ ದರ್ಗಾದ 41ನೇ ವರ್ಷದ ಉರುಸ್‌ಗೆ ಚಾಲನೆ ನೀಡಲಾಗಿದೆ.
ಶುಕ್ರವಾರದಿಂದ ಉರುಸ್ ಆರಂಭಗೊಂಡಿದ್ದು 3 ದಿನಗಳ ಕಾಲ ನಡೆಯಲಿದೆ. ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ಮೂಲೆಗಳಿಂದ ಆಗಮಿಸುವ ಭಕ್ತರು ಧರ್ಮಬೇಧ ಮರೆತು ಉತ್ಸವದಲ್ಲಿ ಭಾಗಿಯಾಗುತ್ತಾರೆ. ಈ ಸಂದರ್ಭ ಭಕ್ತರು ತಮ್ಮ ಹರಕೆ ವಿಶೇಷ ರೀತಿಯಲ್ಲಿ ಸಮರ್ಪಿಸುತ್ತಾರೆ.
ದರ್ಗಾ ಕಮಿಟಿಯ ವಿಶೇಷತೆ: ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ದರ್ಗಾ ಕಮಿಟಿಗೆ ಅಧ್ಯಕ್ಷ ಮತ್ತು ಗೌರವಾಧ್ಯಕ್ಷರು ಹಿಂದೂಗಳು ಎಂಬುದು ಇಲ್ಲಿಯ ವಿಶೇಷ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ. ವೆಂಕಟರಮಣ ಉಡುಪ ಅಧ್ಯಕ್ಷರಾಗಿ ದರ್ಗಾದ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ್ದಾರೆ. ಅವರ ನಿಧನದ ನಂತರ ಅವರ ಮಗ ಮತ್ತಿಮನೆ ವಿನಾಯಕ ಉಡುಪ ಅಧ್ಯಕ್ಷರಾಗಿದ್ದಾರೆ. ಇನ್ನೂ ಗೌರವಾಧ್ಯಕ್ಷರಾಗಿ ತಾಪಂ ಮಾಜಿ ಅಧ್ಯಕ್ಷ ಪಟೇಲ್ ಗರುಡಪ್ಪ ಗೌಡ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಮರಸ್ಯದ ಕೇಂದ್ರ: ನಗರದ ವಲಿಯುಲ್ಲಾ ಅವರ ದರ್ಗಾಕ್ಕೆ ಕೇವಲ ಮುಸ್ಲಿಂ ಬಾಂಧವರು ಮಾತ್ರ ನಡೆದುಕೊಳ್ಳುವುದಿಲ್ಲ.
ದರ್ಗಾ ಅಕ್ಕಪಕ್ಕದ ಎಲ್ಲಾ ಧರ್ಮದ ನಿವಾಸಿಗಳು ವಿಶೇಷವಾಗಿ ಆರಾಧಿಸಿಕೊಂಡು ಬಂದಿದ್ದಾರೆ. ತಮ್ಮ ದನಕರುಗಳ ಕಳವು, ರೋಗಬಾಧೆ, ಸಂತಾನಹೀನತೆ, ಕೆಲಸದಲ್ಲಿ ಹಿನ್ನೆಡೆ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ದರ್ಗಾಕ್ಕೆ ಹರಕೆ ಕಟ್ಟಿಕೊಂಡರೆ ಈಡೇರುತ್ತದೆ ಎಂಬ ನಂಬಿಕೆ ಅವರದು.
ಇನ್ನು ಉರುಸ್‌ಗೆ ಚಾಲನೆ ಬಂದಿದ್ದೂ ಕೂಡ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ. ವೆಂಕಟರಮಣ ಉಡುಪರಿಗೆ ಬಿದ್ದ ಕನಸಿನಿಂದ. ಅವರದೇ ಮುಂದಾಳತ್ವದಲ್ಲಿ 4 ದಶಕಗಳ ಕಾಲ ಉರುಸ್ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಉರುಸ್‌ನ ಪ್ರತಿದಿನ ಮೌಲ್ವಿಗಳಿಂದ ಪ್ರವಚನ, ಸಂದಲ್ ಮೆರವಣಿಗೆ ಹಾಗೂ ಕೊನೆಯ ದಿನ ಅನ್ನಸಂತರ್ಪಣೆ ನಡೆಯುತ್ತದೆ.