ಚಪ್ಪಡಿ ಪುಡಿಗಟ್ಟಿದ ಕ್ರಮಕ್ಕೆ ಖಂಡನೆ
ಕಡೂರು: ಕಾಂಕ್ರೀಟ್ ರಸ್ತೆ ನಿರ್ಮಾಣದ ಅಭಿವೃದ್ಧಿ ನೆಪದಲ್ಲಿ ಲಕ್ಷಾಂತರ ರು.ಗಳ ಕಲ್ಲು ಚಪ್ಪಡಿಗಳನ್ನು ಜೆಸಿಬಿಯಿಂದ ಪುಡಿ ಮಾಡಲಾಗಿದೆ ಎಂದು ಪಟ್ಟಣದ ಅಲ್ಪಸಂಖ್ಯಾತರ ವಿಭಾಗದ ಕಾಂಗ್ರೆಸ್ ಮುಖಂಡ ಮಂಡಿ ಇಕ್ಬಾಲ್ ಆರೋಪಿಸಿದ್ದಾರೆ. ಪಟ್ಟಣದ ಕೋಟೆಯ 16ನೇ ವಾರ್ಡಿನಲ್ಲಿ ಜೆಸಿಬಿ ಯಂತ್ರದಿಂದ ಕಲ್ಲು ಚಪ್ಪಡಿಗಳನ್ನು ನೆಲಸಮ ಮಾಡುವ ಮೂಲಕ ಲಕ್ಷಾಂತರ ರು. ಮೌಲ್ಯದ ಕಲ್ಲುಗಳನ್ನು ಪುಡಿ ಮಾಡಲಾಗಿದೆ. 8 ವರ್ಷದ ಹಿಂದೆ ಪುರಸಭಾ ಸದಸ್ಯರಾಗಿದ್ದ ಕೆ.ಜೆ.ರಾಮಪ್ರಸಾದ್ ಅವರು 16ನೇ ವಾರ್ಡಿನ ಕೋಟೆಯ ಗುಡಿಹಟ್ಟಿ ಬೀದಿಯನ್ನು ಕಲ್ಲು ಚಪ್ಪಡಿಗಳನ್ನು ಅಳವಡಿಸಿ ಸುಮಾರು 120 ಮೀಟರ್ ರಸ್ತೆ ನಿರ್ಮಾಣ ಮಾಡಿಸುವ ಮೂಲಕ ಗಟ್ಟಿಮುಟ್ಟಾದ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಯಾವ ಗುಂಡಿ ಗೊಟರುಗಳಿಲ್ಲದೆ ಉತ್ತಮ ಸ್ಥಿತಿಯಲ್ಲಿದ್ದ ಈ ಗುಡಿಹಟ್ಟಿ ಬೀದಿಯನ್ನು ಇದೀಗ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸುವ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಈ ಮೊದಲು ಈ ರಸ್ತೆಗೆ ಅಳವಡಿಸಿದ್ದ ಕಲ್ಲು ಚಪ್ಪಡಿಗಳನ್ನು ಜಾಗರೂಕತೆಯಿಂದ ತೆಗೆದು ಜೆಸಿಬಿ ಯಂತ್ರದಿಂದ ಪುಡಿಪುಡಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.