ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆ
ಚಿಕ್ಕಮಗಳೂರು: ಜಿಲ್ಲೆಯ ಕೆಲವೆಡೆ ಶನಿವಾರ ಸಂಜೆಯ ನಂತರದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಬಲವಾಗಿ ಬೀಸಿದ ಗಾಳಿಗೆ ಕೆಲವೆಡೆ ಮರಗಳು ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿತ್ತು.
ಶೃಂಗೇರಿ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು ಎರಡು ಗಂಟೆಗೂ ಅಧಿಕ ಕಾಲ ಮಳೆ ಬಂದಿತು. ಮೂಡಿಗೆರೆಯಲ್ಲೂ ಸಹ ಮಳೆಯಾಗಿದೆ. ಚಿಕ್ಕಮಗಳೂರು ಪಟ್ಟಣದಲ್ಲಿ ಸಂಜೆ 7 ಗಂಟೆಯ ವೇಳೆಗೆ ಮಳೆ ಬಂದಿತು. ಬಯಲುಸೀಮೆಯ ಕಡೂರು ಹಾಗೂ ತರೀಕೆರೆಯಲ್ಲಿ ಸಾಧಾರಣ ಮಳೆಯಾಗಿದ್ದರೆ, ಬೀರೂರು ಪಟ್ಟಣದಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಧಾರಾಕಾರವಾಗಿ ಮಳೆ ಸುರಿಯಿತು.
ಶೃಂಗೇರಿ ಸುತ್ತಮುತ್ತ...
ಶೃಂಗೇರಿ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಕೆಲವೆಡೆ ಶನಿವಾರ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಕಳೆದ ಕೆಲದಿನಗಳ ಹಿಂದೆ ಒಂದೆರೆಡು ದಿನ ಮಳೆ ಸುರಿದಿತ್ತು. ಕೆಲದಿನಗಳಿಂದ ಬಿಸಿಲ ಸುಡು ವಾತಾವರಣ ಉಂಟಾಗಿತ್ತು. ಮಧ್ಯಾಹ್ನದಿಂದ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು.
ಸಂಜೆಯ ವೇಳೆಯವರೆಗೂ ಸಾಧಾರಣ ಮಳೆ ಬರುತ್ತಿತ್ತ.ಗುಡುಗು ಸಿಡಿಲಿನ ಆರ್ಭಟಕ್ಕೆ ಮಧ್ಯಾಹ್ನದಿಂದಲೇ ವಿದ್ಯುತ್ ಸ್ಥಗಿತಗೊಂಡಿತ್ತು. ಮೊದಲೇ ಪದೇ ಪದೇ ಅನಿಯಮಿತ ವಿದ್ಯುತ್ ಕಡಿತ ಉಂಟಾಗುತ್ತಿತ್ತು.
ಆದರೆ ಗುಡುಗು ಸಿಡಿಲಿನ ಆರ್ಭಟ ವಿದ್ಯುತ್ ಕಡಿತಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಾಗಿದೆ.