ಪ್ರಾಮಾಣಿಕತೆ ಮೆರೆದ ನಿರ್ವಾಹಕ
ಚಿಕ್ಕಮಗಳೂರು: ಸುಮಾರು ಒಂದು ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣವಿದ್ದ ವ್ಯಾನಿಟಿಬ್ಯಾಗ್ ಅನ್ನು ಮಾಲೀಕರಿಗೆ ಹಿಂತಿರುಗಿಸಿದ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಯೊಬ್ಬ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಡೂರಿನಿಂದ ನಿಡಘಟ್ಟ, ಸಿಂದಿಗೆರೆ ಮಾರ್ಗವಾಗಿ ಚಿಕ್ಕಮಗಳೂರಿಗೆ ಸಂಚರಿಸುವ ಗ್ರಾಮಾಂತರ ಸಾರಿಗೆಯಲ್ಲಿ ಏ. 19ರ ಬೆಳಗ್ಗೆ 11.15 ಕ್ಕೆ ಕಡೂರಿನಿಂದ ಹೊರಟ ನಾಗರತ್ನ ಎನ್ನುವರು ಸಿಂದಿಗೆರೆಯಲ್ಲಿ ಇಳಿಯುವ ಗಡಿಬಿಡಿಯಲ್ಲಿ ವ್ಯಾನಿಟಿಬ್ಯಾಗನ್ನು ಬಸ್ಸಿನಲ್ಲೇ ಬಿಟ್ಟು ಇಳಿದಿದ್ದರು.
ಪತ್ತೆ ಹಚ್ಚಲು ಮನವಿ: ಬಸ್ಸು ಬಸವನಕೋಡಿ ದಾಟಿದ ಮೇಲೆ ವ್ಯಾನಿಟಿಬ್ಯಾಗ್ ನೋಡಿದ ನಿರ್ವಾಹಕ ರವೀಶ್ ಕುಮಾರ್ ವಿಳಾಸಕ್ಕಾಗಿ ತಡಕಾಡಿದಾಗ ಅದರೊಳಗಿದ್ದ ಬಸ್ಸು ಟಿಕೆಟ್‌ನಿಂದ ಸಿಂದಿಗೆರೆಯವರದೆಂದು ಕಂಡುಕೊಂಡರು.
ಭಾವಚಿತ್ರದ ಜೊತೆಗೆ ಬ್ಯಾಗ್‌ನಲ್ಲಿ 1 ಜೊತೆ ಮಕ್ಕಳ ಕಡಗ, 4 ಉಂಗುರ, 2 ಕಾಲು ಬಳೆ, 4 ಬಳೆ, 1 ಜೊತೆ ಓಲೆ, ಹೀಗೆ ಲಕ್ಷ ರೂ.ಗೂ ಹೆಚ್ಚಿನ ಒಡವೆಗಳಿದಿದ್ದು ಕಂಡುಬಂತು. ಆದರೆ, ವಿಳಾಸ ಇರಲಿಲ್ಲ. ಬಸ್ಸು ಚಿಕ್ಕಮಗಳೂರಿಗೆ ಬಂದಮೇಲೆ ರವೀಶ್ ಸಿಂದಿಗೆರೆಯಲ್ಲಿರುವ ಅಕ್ಕನ ಮಗನಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಮಹಿಳೆಯನ್ನು ಪತ್ತೆ ಹಚ್ಚಲು ವಿನಂತಿಸಿದ್ದರು.
ಮರುದಿನ ಬೆಳಿಗ್ಗೆ ಇದೇ ಬಸ್ ಸಿಂದಿಗೆರೆಗೆ ಬಂದಾಗ ಮಹಿಳೆ ನಾಗರತ್ನ ಅಂದಿನ ನಿರ್ವಾಹಕರಿಂದ ರವೀಶ್ ರ ಮೊಬೈಲ್‌ಗೆ ಸಂಪರ್ಕಿಸಿ ಬ್ಯಾಗ್ ಇರುವುದನ್ನು ಖಚಿತಪಡಿಸಿಕೊಂಡರು. ಮರುದಿನ ಇದೇ ಬಸ್ಸಿನಲ್ಲಿ ಬಂದ ರವೀಶ್ ಬ್ಯಾಗ್ ಹಿಂತಿರುಗಿಸಿದರು.
ಹುಲಿಕೆರೆಯ ರವೀಶ್ ಚಟ್ನಳ್ಳಿಯ ಮಾವನಮನೆಯಲ್ಲಿ ವಾಸವಾಗಿದ್ದು, ಈ ಹಿಂದೆ ಮದುವೆ ಜವಳಿಗಂಟನ್ನು ಬಸ್ಸಿನಲ್ಲೇ ಬಿಟ್ಟು ಹೋದವರನ್ನೂ ಹುಡುಕಿ ಹಿಂತಿರುಗಿಸಿದ್ದನ್ನು ಗ್ರಾಮಸ್ಥರು ಸ್ಮರಿಸಿದ್ದಾರೆ.