ವಿದ್ಯಾಲಯ ಆರಂಭಕ್ಕೆ ಬಿಜೆಪಿ ಮನವಿ
ಚಿಕ್ಕಮಗಳೂರು: ಕುದುರೆಮುಖದಲ್ಲಿರುವ ಕೇಂದ್ರೀಯ ವಿದ್ಯಾಲಯವನ್ನು ಪುನಾರಂಭ ಮಾಡುವಂತೆ ಬಿಜೆಪಿ ಜಿಲ್ಲಾ ಶೈಕ್ಷಣಿಕ ಪ್ರಕೋಷ್ಟ ಘಟಕ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಶೇಖರಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಘಟಕದ ಜಿಲ್ಲಾ ಸಂಚಾಲಕ ದೀಪಕ್ ದೊಡ್ಡಯ್ಯ, ಈ ಶಾಲೆಯಲ್ಲಿ 172 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದರು.
ಉಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯ ಸರ್ಕಾರದ ಪರವಾಗಿ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ನಿಗದಿತ ವೇಳಾಪಟ್ಟಿಯಂತೆ ಪಠ್ಯಕ್ರಮ ನಡೆಸಲು ಅವಶ್ಯವಿರುವ ಬೋಧನಾ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳುವ ಮೂಲಕ ಶಾಲೆಯ ಶೈಕ್ಷಣಿಕ ಚಟುವಟಿಕೆ ಆರಂಭಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಾರಿ ದೀಪವಾಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಪದ್ಮಾ ಚಂದ್ರಪ್ಪ, ನಗರಸಭೆ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್, ಮಾಜಿ ಅಧ್ಯಕ್ಷ ಪ್ರೇಂಕುಮಾರ್, ಎಚ್.ಡಿ. ತಮ್ಮಯ್ಯ, ಬಿಜೆಪಿ ನಗರಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹಾಜರಿದ್ದರು.